ADVERTISEMENT

ಸರಗೂರು: ಹುಲಿ ಸೆರೆಗೆ ‘ವಾಕ್‌ಥ್ರೂ ಕೇಜ್’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:28 IST
Last Updated 9 ನವೆಂಬರ್ 2025, 2:28 IST
<div class="paragraphs"><p>ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ‘ವಾಕ್ ಥ್ರೂ ಕೇಜ್’ ಬಳಸಲಾಯಿತು</p></div>

ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ‘ವಾಕ್ ಥ್ರೂ ಕೇಜ್’ ಬಳಸಲಾಯಿತು

   

ಸರಗೂರು: ಸರಗೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳ ಬಳಿ ಮಾನವನ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಈ ಭಾಗದ ಜನರಲ್ಲಿ ಆತಂಕ ಮುಂದುವರಿದಿದೆ.

ಕಾರ್ಯಾಚರಣೆಯನ್ನು ಶನಿವಾರವೂ ಮುಂದುವರಿಸಲಾಯಿತು. ಆದರೆ, ಹುಲಿ ಸೆರೆಯಾಗಿಲ್ಲ. 25 ದಿನಗಳಾದರೂ ಕಾರ್ಯಾಚರಣೆ ಫಲ ಕೊಟ್ಟಿಲ್ಲ. ಇದು, ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಈ ನಡುವೆ, ಹುಲಿ ಕಾಲಿಟ್ಟ ಕೂಡಲೇ ಎರಡೂ ಕಡೆಯಿಂದ ಬಾಗಿಲು ಮುಚ್ಚಿಕೊಳ್ಳುವ ವಿಶೇಷ ತಂತ್ರಜ್ಞಾನವುಳ್ಳ ಬೋನನ್ನು (ವಾಕ್ ಥ್ರೂ ಕೇಜ್) ಎಂಬ ವಿಶೇಷ ಬೋನ್ ಬಳಸಲಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ನುಗು, ಮೊಳೆಯೂರು ಅರಣ್ಯ ವಲಯಗಳಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ (ಕೂಂಬಿಂಗ್) ನಡೆಸಲಾಯಿತು. ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅರಣ್ಯ ಇಲಾಖೆ ಸಿಬ್ಬಂದಿಯು ಕಾಡಾನೆಗಳಾದ ‘ಭೀಮ’, ‘ಮಹೇಂದ್ರ’, ‘ಲಕ್ಷ್ಮಣ’, ‘ಶ್ರೀಕಂಠ’ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಖುತ್ತಿದ್ದಾರೆ. ಎಸಿಎಫ್ ಡಿ.ಪರಮೇಶ್, ಡಾ.ರಮೇಶ್, ಡಾ.ವಾಸೀಂ ಮಿರ್ಜಾ, ನುಗು ಆರ್‌ಎಫ್‌ಒ ವಿವೇಕ್, ಆರ್‌ಎಫ್‌ಒ ಅಕ್ಷಯ್‌ಕುಮಾರ್ ಸೇರಿದಂತೆ 130ಕ್ಕೂ ಅಧಿಕ ಸಿಬ್ಬಂದಿ ಭಾಗವಹಿಸಿದ್ದಾರೆ.

ನಂಜನಗೂಡು ತಾಲ್ಲೂಕಿನ ಹೊಸವೀಡು ಕಾಲೊನಿಯಲ್ಲಿ ಎರಡು ಹುಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದ ಕೂಡಲೇ ಬುಧವಾರ ಒಂದು ಹೆಣ್ಣು ಹುಲಿ ಸೆರೆ ಹಿಡಿದ ಇಲಾಖೆ ಮತ್ತೊಂದು ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದೆ. ಓಂಕಾರ ವಲಯ ಅರಣ್ಯದಂಚಿನ ನಾಗನಾಣಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡ ವಿಷಯ ತಿಳಿದ ಕೂಡಲೇ ಎಸಿಎಫ್ ಡಿ.ಪರಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಂಬಿಂಗ್ ನಡೆಸಿದರು.

ಆರ್‌ಎಫ್‌ಒಗಳಿಗೆ ಚಿಕಿತ್ಸೆ: ‘ಹಳೇಹೆಗ್ಗುಡಿಲು ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿಯಾದ ಸ್ಥಳದಲ್ಲಿ ಹಲ್ಲೆಗೊಳಗಾದ ಆರ್‌ಎಫ್‌ಒಗಳಾದ ಅಮೃತಾ ಎ.ಮಾಯಪ್ಪ, ರಾಮಾಂಜನೇಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಎಸಿಎಫ್ ಡಿ.ಪರಮೇಶ್ವರ್ ತಿಳಿಸಿದರು.

ಮೊಳೆಯೂರಲ್ಲಿ ಕೂಂಬಿಂಗ್: ಕೂಡಗಿ ಗ್ರಾಮದ ರೈತನನ್ನು ಬಲಿ ಪಡೆದ ಹುಲಿ ಸೆರೆಗೆ ಮೊಳೆಯೂರು ವಲಯದ ಅರಣ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗುರುವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

ಬಾಳಗಂಚಿ ಅರಣ್ಯ ಪ್ರದೇಶದ ತೆಲಗುಮಸಹಳ್ಳಿ, ಕಾಟವಾಳು, ದೇವಲಾಪುರ, ದೇವಲಾಪುರ ಶೆಡ್ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದ ಎಂಬ ವಿಷಯ ತಿಳಿದು ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿ ವ್ಯಾಪ್ತಿಯ ತಾರಕ, ಸತ್ತಿಗೆಹುಂಡಿ, ಪೆಂಜಹಳ್ಳಿ, ಹುಣಸೇಕುಪ್ಪೆ, ಸೋಗಹಳ್ಳಿ, ಕೆಂಪೇಗೌಡನ ಹುಂಡಿ, ಮಂಚೇಗೌಡನಹಳ್ಳಿ, ಹೊನ್ನಮ್ಮನಕಟ್ಟೆ, ಹೊಸಹೊಳಲು, ರಾಗಲಕುಪ್ಪೆ, ಮಗ್ಗೆ, ಮಳಲಿ, ಎನ್‌.ಬೆಳ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೆ.30ರಿಂದ ಕಾರ್ಯಾಚರಣೆ ನಡೆಯುತ್ತಿದೆ.

‘3 ತಂಡ ರಚಿಸಿಕೊಂಡು ತಾರಕ ಶಾಖೆಯ ವ್ಯಾಪ್ತಿಯಲ್ಲಿ ಒಂದು ತಂಡ ಮತ್ತು ಉದ್ಬೂರು ಶಾಖೆಯ ವ್ಯಾಪ್ತಿಯಲ್ಲಿ 2 ತಂಡ ನೇಮಿಸಿಕೊಂಡು ವಲಯದ ಅರಣ್ಯದ ಹೊರಭಾಗದಲ್ಲಿ, ರೈತರ ಜಮೀನು ಮತ್ತು ತೋಟಗಳಲ್ಲಿ ಹಾಗೂ ಗ್ರಾಮಗಳ ಗಡಿ ಭಾಗದಲ್ಲಿ ಕೋಂಬಿಂಗ್‌ ಕಾರ್ಯಚರಣೆ ಕೈಗೊಳ್ಳುವ ಮೂಲಕ ಹುಲಿಯೊಂದರನ್ನು ಸುರಕ್ಷಿತವಾಗಿ ವಾಪಸ್‌ ಅರಣ್ಯಕ್ಕೆ ಯಶಸ್ವಿಯಾಗಿ ಅಟ್ಟಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಸಹಾಯವಾಣಿ

‘ತಾಲ್ಲೂಕಿನ‌ ಇಟ್ನಾ ಗ್ರಾಮದಲ್ಲಿ ಶನಿವಾರ ಹುಲಿಯು ಗವಿಗುಡಿ ಬಳಿ ಬೆಳಗಿನ‌ ಜಾವ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕದಲ್ಲಿ‌ಇದ್ದಾರೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಇಟ್ನ ಗ್ರಾಮದ ಸುತ್ತಮುತ್ತ ಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಗ್ರಾಮಸ್ಥರು ಹಾಗೂ ರೈತರು ಜಾಗ್ರತೆ ವಹಿಸಬೇಕು’ ಎಂದು ಶಾಸಕ ಅನಿಲ್‌ ಚಿಕ್ಕಮಾದು ತಿಳಿಸಿದ್ದಾರೆ. ‘ಹುಲಿ ಚಿರತೆ ಕಂಡು ಬಂದಲ್ಲಿ ಅಥವಾ ಅದರ ಹೆಜ್ಜೆಗಳು ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926ಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಕೋರಿದ್ದಾರೆ.

ಆನೆ ಮೂಲಕ ಶುಕ್ರವಾರ ರಾತ್ರಿ ಕೂಂಬಿಂಗ್‌ ನಡೆಸಲಾಯಿತು
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.