ಮೈಸೂರು: ದಸರಾ ಜಂಬೂಸವಾರಿ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸಿದ್ದ ಗಜಪಡೆಯು ಸೋಮವಾರ ಕಾಡಿನ ಶಿಬಿರಗಳಿಗೆ ಮರಳುವಾಗಲೂ ಗಾಂಭೀರ್ಯ ಪ್ರದರ್ಶಿಸಿದವು. ಉಳಿದಿದ್ದ ಶೆಡ್‌ನಿಂದಲೇ ಲಾರಿ ಏರಿದ ಭೀಮ ಆನೆಯು ನೆರೆದಿದ್ದ ಆನೆಪ್ರಿಯರ ಶಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿದ.
ಅರಮನೆ ಆವರಣದಲ್ಲಿ ನಡೆದ ‘ದಸರಾ ಆನೆಗಳ ಬೀಳ್ಕೊಡುಗೆ’ಯು ಭಾವುಕ ವಾತಾವರಣವನ್ನು ನಿರ್ಮಿಸಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಲಾರಿಗಳನ್ನು ಯಾವುದೇ ತೊಂದರೆ ನೀಡದೇ, ಮಾವುತರನ್ನು ಸತಾಯಿಸದೇ ಆಜ್ಞೆ ಪಾಲಿಸಿದವು.
ಹಟ ಮಾಡಿದ ಏಕಲವ್ಯ: ಮೊದಲ ಬಾರಿ ದಸರಾದಲ್ಲಿ ಭಾಗವಹಿಸಿ, ಜಂಬೂಸವಾರಿಯಲ್ಲೂ ಭಾಗವಹಿಸಿ ಭೇಷ್ ಎನಿಸಿಕೊಂಡಿದ್ದ ‘ಏಕಲವ್ಯ’ ಕಾಡಿಗೆ ತೆರಳಲು ‘ಒಲ್ಲೆ’ ಎಂದ. ಮೂರ್ನಾಲ್ಕು ಬಾರಿ ಲಾರಿಯ ಒಳಗೆ ಕಾಲಿಟ್ಟು ತಿರುಗಿ ಬಂದ. ಹಿಂದೆ ನಿಂತಿದ್ದ ಆನೆಗಳ ಕಡೆಗೆ ಮುಖ ಮಾಡಿ ಬೇಸರಿಸಿದ. ಮಾವುತ ತನ್ನ ಪಟ್ಟು ಉಪಯೋಗಿಸಿ ಲಾರಿಯೊಳಗೆ ಕರೆದೊಯ್ದ.
ರೋಹಿತ, ಸುಗ್ರೀವ ಆನೆಗಳು ಲಾರಿ ಏರಲು ಒಮ್ಮೆ ಹಿಂದೇಟು ಹಾಕಿದರೂ ನಂತರ ತೊಂದರೆ ನೀಡದೆ ಏರಿದವು. ಕುಮ್ಕಿ ಆನೆಗಳಾಗಿ ಪ್ರಥಮ ಬಾರಿ ಭಾಗವಹಿಸಿ ಯಶಸ್ವಿಯಾದ ‘ಲಕ್ಷ್ಮಿ’ ಹಾಗೂ ‘ಹಿರಣ್ಯಾ’ ಕೊಸರಾಡದೇ ಲಾರಿ ಏರಿ ನಾವು ಸಮರ್ಥರು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದವು. ಹೊಸ ವಾತಾವರಣಕ್ಕೆ ಬಂದು ಕುಣಿದು ಕುಪ್ಪಳಿಸುತ್ತಿದ್ದ ಮಾವುತರು, ಕಾವಾಡಿಗಳ ಮಕ್ಕಳು ಬೇಸರದಿಂದಲೇ ಬ್ಯಾಗ್‌ನೊಂದಿಗೆ ವಾಪಸಾದರು.
ಅಭಿಮನ್ಯವಿನ ಜೊತೆ ಬಂದಿದ್ದ ಮಾವುತ ವಸಂತನ ಕುಟುಂಬದವರು ಬಕೆಟ್‌ಗಳನ್ನು ಬಾರಿಸುತ್ತಾ, ತಮ್ಮ ಸಾಂಪ್ರದಾಯಿಕ ಹಾಡು ಹಾಡಿದರು. ಸೇರಿದ್ದ ನೂರಾರು ಜನರು ತಮ್ಮ ನೆಚ್ಚಿನ ಆನೆಗಳಲ್ಲಿ ಕೈ ಬೀಸಿ ವಿದಾಯ ಹೇಳಿದರು. ಅರಮನೆ ಆನೆ ಚಂಚಲೆಯು ಗೆಳೆಯರು ತೆರಳುತ್ತಿರುವುದನ್ನು ಕಂಡು ಸೊಂಡಿಲೆತ್ತಿ ಕೂಗಿದಳು.
ಸಾಂಪ್ರದಾಯಿಕ ಪೂಜೆ: ಆನೆಗಳಿಗೆ ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಬೂದುಗುಂಬಳ ಒಡೆದು ದೃಷ್ಟಿ ತೆಗೆದರು. ವಿವಿಧ ಹಣ್ಣು ಹಂಪಲು ಹಾಗೂ ಬೆಲ್ಲ ನೀಡಲಾಯಿತು.
ಪೂಜೆ ಬಳಿಕ ಮಾವುತರು ಹಾಗೂ ಕಾವಾಡಿಗರ ಕುಟುಂಬ ವರ್ಗದವರಿಗೆ ಉಪಾಹಾರ ನೀಡಿ ಅವರನ್ನು ಬೀಳ್ಕೊಡಲಾಯಿತು. ಅರಮನೆ ಆಡಳಿತ ಮಂಡಳಿ ವತಿಯಿಂದ 65 ಜನರಿಗೆ ತಲಾ ₹15 ಸಾವಿರ ಗೌರವಧನದ ಹಾಗೂ ದಿನಸಿ ನೀಡಲಾಯಿತು. ನಂತರ ಎಲ್ಲಾ ಆನೆಗಳನ್ನು ಲಾರಿ ಹತ್ತಿಸಿ ಶಿಬಿರಗಳಿಗೆ ಕಳುಹಿಸಲಾಯಿತು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್ ಐ.ಬಿ.ಪ್ರಭುಗೌಡ, ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್, ಆರ್‌ಎಫ್‌ಒ ಸಂತೋಷ್, ಪಶು ವೈದ್ಯ ಡಾ.ಮುಜೀಬ್ ಇದ್ದರು.
ಮುಗಿಬಿದ್ದ ಜನ: ಹೈರಾಣಾದ ಪೊಲೀಸರು!
‘ದಸರಾ ಆನೆಗಳ ಬೀಳ್ಕೊಡುಗೆ’ ದಿನವೂ ಗಜಪಡೆಯ ಗಾಂಭೀರ್ಯ ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಜನ ಆಗಮಿಸಿದರು. ಸಾರ್ವಜನಿಕರನ್ನು ದೂರದಲ್ಲೇ ತಡೆದರೂ ಅಧಿಕಾರಿಗಳ ಕುಟುಂಬದವರ ನೆಪದಲ್ಲಿ ಅನೇಕರು ಒಳ ನುಸುಳಿ ಫೊಟೋ ಕ್ಲಿಕ್ಕಿಸಿಕೊಳ್ಳಲು ಆನೆಗಳ ಬಳಿ ಮುಗಿಬಿದ್ದರು. ಅವರ ಗುಂಪು ಚದುರಿಸಲು ಸೀಮಿತ ಸಂಖ್ಯೆಯಲ್ಲಿದ್ದ ಪೊಲೀಸರು ಒದ್ದಾಡಿದರು. ಆನೆಗಳನ್ನು ಲಾರಿಗೆ ಹತ್ತಿಸುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಕರೆಸಿಕೊಳ್ಳಲಾಯಿತು.
‘ಆನೆಗಳಿಂದ ಉತ್ತಮ ಸ್ಪಂದನೆ’
‘ಈ ಸಾಲಿನ ದಸರಾ ಯಶಸ್ವಿಯಾಗಿ ನಡೆದಿವೆ. ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಭಿಮನ್ಯು ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ಸುಗೊಳಿಸಿದ್ದು ಎಲ್ಲಾ ಆನೆಗಳೂ ಅತ್ಯುತ್ತಮವಾಗಿ ಸ್ಪಂದಿಸಿವೆ. ಅರ್ಜುನನ ಅನುಪಸ್ಥಿತಿ ಕಾಡದಂತೆ ಧನಂಜಯ ತನ್ನ ಕಾರ್ಯ ನಿಭಾಯಿಸಿದ್ದಾನೆ. ಧನಂಜಯ ಮಹೇಂದ್ರನನ್ನು ಅಂಬಾರಿ ಆನೆಯಾಗಿ ಗುರುತಿಸಿದ್ದು ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.