ADVERTISEMENT

ಪರಿಸರದ ತುರ್ತು ಪರಿಸ್ಥಿತಿ ನಿರ್ಮಾಣ: ಸಾಹಿತಿ ರೂಪ ಹಾಸನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 12:21 IST
Last Updated 27 ನವೆಂಬರ್ 2022, 12:21 IST
ಮೈಸೂರಿನಲ್ಲಿ ಅವಿನಾಶ್ ಟಿಜಿಎಸ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕವನ್ನು ಸಾಹಿತಿ ಬಂಜಗೆರೆ ಜಯ‍ಪ್ರಕಾಶ್ ಭಾನುವಾರ ಬಿಡುಗಡೆ ಮಾಡಿದರು. ಪತ್ರಕರ್ತ ಅಶೋಕ್ ರಾಮ್‌ ಡಿ.ಆರ್., ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ಸಾಹಿತಿ ರೂಪ ಹಾಸನ ಹಾಗೂ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇದ್ದಾರೆ/ ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಅವಿನಾಶ್ ಟಿಜಿಎಸ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕವನ್ನು ಸಾಹಿತಿ ಬಂಜಗೆರೆ ಜಯ‍ಪ್ರಕಾಶ್ ಭಾನುವಾರ ಬಿಡುಗಡೆ ಮಾಡಿದರು. ಪತ್ರಕರ್ತ ಅಶೋಕ್ ರಾಮ್‌ ಡಿ.ಆರ್., ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ಸಾಹಿತಿ ರೂಪ ಹಾಸನ ಹಾಗೂ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ನಾವಿಂದು ಪರಿಸರದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ’ ಎಂದು ಸಾಹಿತಿ ರೂಪ ಹಾಸನ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಅವಿನಾಶ್ ಟಿಜಿಎಸ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಷಮ ಕಾಲಘಟ್ಟದಲ್ಲಿದ್ದೇವೆ. ದೇಶದ ಶೇ 60ರಷ್ಟು ಮಂದಿ ತೊಡಗಿರುವ ಕೃಷಿ ಕ್ಷೇತ್ರ ಅವನತಿಯ ಹಾದಿಯಲ್ಲಿರುವ ಧಾರುಣತೆಯನ್ನು ಕಾಣುತ್ತಿದ್ದೇವೆ. ರೈತರ ಆತ್ಮಹತ್ಯೆ ಪ್ರಕರಣಗಳು ಬೇಸಾಯದ ಬದುಕಿನ ತಲ್ಲಣಗಳ ಪ್ರತಿರೂಪವಾಗಿವೆ. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪತೀತ್ಯವು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಕೃಷಿಯಲ್ಲಿ ರಚನಾತ್ಮಕ, ಕ್ರಿಯಾಶೀಲ ಹಾಗೂ ‌ಪ್ರಕೃತಿಗೆ ಹತ್ತಿರವಾದ ಪ್ರಯೋಗಗಳನ್ನು ಇಂದು ಮಾಡಬೇಕು. ಪ್ರಕೃತಿ ಧರ್ಮವನ್ನು ಅರಿಯಬೇಕು; ಅನುಸರಿಸಬೇಕು. ನಮ್ಮೊಂದಿಗಿರುವ ಜೀವವೈವಿಧ್ಯವನ್ನೂ ತಿಳಿದುಕೊಳ್ಳಬೇಕು. ಪ್ರಾಕೃತಿಕ ಸಂರಚನೆ ಇರುವುದು ನಮಗಾಗಿ ಮಾತ್ರವೇ ಎಂದು ಭಾವಿಸಿದ್ದೇವೆ. ಆದರೆ, ಮನುಷ್ಯನು ಜೀವವಿಕಸನ ಪ್ರಕ್ರಿಯೆಯಲ್ಲಿ ಈಚೆಗೆ ಬಂದವರು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳಿಗೆ ಪ್ರಕೃತಿಯ ಬಗ್ಗೆ ಅರ್ಥ ಮಾಡಿಸಬೇಕು. ಇಲ್ಲದಿದ್ದರೆ ಮನುಷ್ಯ ಸಂತತಿಗೆ ಹೆಚ್ಚು ಉಳಿಗಾಲವಿಲ್ಲ’ ಎಂದರು.

ಸರ್ಕಾರ ಬೆಂಬಲ ನೀಡಲಿ: ‘ಪ್ರಕೃತಿಗೆ ಹತ್ತಿರವಾದ ನೈಸರ್ಗಿಕ ಮೂಲದ ಕೃಷಿಯನ್ನು ಬೆಂಬಲಿಸುತ್ತೇವೆ ಎಂಬುದನ್ನು ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ತಿಳಿಸಬೇಕು. ಸಾಮುದಾಯಿಕ ಹಾಗೂ ಸಂಘಟನಾತ್ಮಕ ಕೃಷಿ ಪ್ರಜ್ಞೆ ಬೆಳೆಸಬೇಕು. ಎಲ್ಲೆಲ್ಲಿ ಸರ್ಕಾರಿ ಜಾಗ ಲಭ್ಯವಿದೆಯೋ ಅಲ್ಲಿ ‘ಬೆಳಕಿನ ಬೇಸಾಯ’ದ ‌ಪ್ರಯೋಗಗಳನ್ನು ಮಾಡಬೇಕು. ಇದಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಸರ್ಕಾರ ಬೆಂಬಲ ನೀಡಬೇಕು. ಇದಕ್ಕೆ ಬೆಳಕು ತೋರುವಲ್ಲಿ ‘ಬೆಳಕಿನ ಬೇಸಾಯ’ ಕೃತಿಯು ಸಹಕಾರಿಯಾಗಿದೆ’ ಎಂದು ಹೇಳಿದರು.

ನಿಸರ್ಗದೊಂದಿಗೆ ಅನುಸಂಧಾನ ಅವಶ್ಯ: ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಕೃಷಿಯು ಸುಲಭವಲ್ಲ. ವಿಪರೀತ ತಾಳ್ಮೆ ಮತ್ತು ಶ್ರಮವನ್ನು ಬೇಡುತ್ತದೆ. ಇದಕ್ಕಾಗಿ ದೃಢ ನಿಶ್ಚಯವೂ ಇರಬೇಕಾಗುತ್ತದೆ’ ಎಂದರು.

‘ಸಾಮ್ರಾಜ್ಯಗಳನ್ನು ಕಟ್ಟಲು ತಳಹದಿ ಹಾಕಿಕೊಟ್ಟಿರುವುದು‌ ಕೃಷಿ. ಅದನ್ನು ಲಾಭದಾಯಕ ಮಾಡಲು ನಿಸರ್ಗದೊಂದಿಗೆ ನಡೆಯಬೇಕು.‌ ನಿಸರ್ಗದೊಂದಿಗೆ ಅನುಸಂಧಾನ ಮಾಡಬೇಕೇ‌ ಹೊರತು ಅದರೊಂದಿಗೆ ಯುದ್ಧಕ್ಕಿಳಿಯಬಾರದು’ ಎಂದು ತಿಳಿಸಿದರು.

ದುರಾಸೆ ಸಲ್ಲದು: ‘ನಾವು ನಿಸರ್ಗದ ಚಕ್ರವರ್ತಿಗಳೂ ಅಲ್ಲ, ಸಾಮ್ರಾಟರೂ ಅಲ್ಲ. ಅದರ ಒಂದು ಭಾಗವಷ್ಟೆ. ಅನ್ನವನ್ನು ಚಿನ್ನ ಮಾಡುವ ದುರಾಸೆ ಸಲ್ಲದು. ಪ್ರಕೃತಿಯಲ್ಲಿರುವ ಎಲ್ಲವನ್ನೂ ದೇವರೆಂದು ಭಾವಿಸಬೇಕು’ ಎಂದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ರೈತರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸುವ ಕೆಲಸ ನಡೆಯಬೇಕಿದೆ’ ಎಂದರು.

ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ಬೇಸಾಯದ ಮೇಲೆ ಹಲವು ವಿಷಯಗಳಲ್ಲಿ ಬೆಳಕು ಚೆಲ್ಲುವ ಕೆಲಸವನ್ನು ‘ಬೆಳಕಿನ ಬೇಸಾಯ’ ಕೃತಿಯು ಮಾಡಿದೆ’ ಎಂದು ತಿಳಿಸಿದರು.

ಲೇಖಕ ಅವಿನಾಶ್ ಟಿಜಿಎಸ್, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ಪತ್ರಕರ್ತ ಅಶೋಕ್ ರಾಮ್‌ ಡಿ.ಆರ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.