ADVERTISEMENT

ನಂಜನಗೂಡು: ‘ಕೈಗಾರಿಕೆಗೆ ಕೃಷಿ ಭೂಮಿ ಬಿಡೆವು’

ಕೆಐಎಡಿಬಿ ಅಧಿಕಾರಿ ಮನೆ ಮುಂದೆ ಶವ ಹೂಳಲು ಸಾಧ್ಯವೇ: ರೈತ ಮಹಿಳೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 4:12 IST
Last Updated 18 ಜನವರಿ 2023, 4:12 IST
ತಹಶೀಲ್ದಾರ್ ಕಚೇರಿ ಮುಂಭಾಗ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟಿಸಿದರು
ತಹಶೀಲ್ದಾರ್ ಕಚೇರಿ ಮುಂಭಾಗ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟಿಸಿದರು   

ನಂಜನಗೂಡು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೈಗಾರಿಕೆಗಳ ಸ್ಥಾಪನೆಗಾಗಿ ತಾಲ್ಲೂಕಿನ ಮುದ್ದಹಳ್ಳಿ, ಎಲಚಗೆರೆ ಮತ್ತು ಸಿಂಧುವಳ್ಳಿಪುರದಲ್ಲಿ 448 ಎಕರೆ 38 ಗುಂಟೆ ಕೃಷಿಯೋಗ್ಯ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಜಮಾವಣೆಗೊಂಡ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಡಾ.ಬಿ.ಆರ್‌.ಅಂಬೇಡ್ಕರ್ ಭವನದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ರೈತ ಮಹಿಳೆ ಚಿನ್ನಮ್ಮ ಮಾತನಾಡಿ, ‘ಕೃಷಿ ಭೂಮಿಯನ್ನು ನಂಬಿಕೊಂಡು ನಾವು ಜೀವನ ನಡೆಸುತ್ತಿದ್ದೇವೆ. ಜಮೀನಿನಲ್ಲಿ ನಮ್ಮ ಪೂರ್ವಿಕರ ಸಮಾಧಿಯಿದೆ. ನಾನು ಸತ್ತಾಗಲೂ ನನ್ನ ಮಕ್ಕಳು ಇದೇ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುವಂತೆ ಹೇಳಿದ್ದೇನೆ. ಮುಂದೆ ಕುಟುಂಬದವರು ಸತ್ತರೆ ಕೆಐಎಡಿಬಿ ಅಧಿಕಾರಿಗಳ ಮನೆ ಮುಂದೆ ಹೂಳಲು ಸಾಧ್ಯವೇ? ಯಾವುದೇ ಕಾರಣಕ್ಕೂ ನನ್ನ ಜಮೀನನ್ನು ನೀಡುವುದಿಲ್ಲ’ ಎಂದರು.

ADVERTISEMENT

ಮುದ್ದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಸ್. ಮಹಾದೇವು ಮಾತನಾಡಿ, ‘ಕೃಷಿ ಭೂಮಿ ಕಳೆದುಕೊಂಡರೆ ನಮ್ಮ ಜೀವನ ಬೀದಿಗೆ ಬೀಳುತ್ತದೆ. ನನ್ನ ಜಮೀನಿನಲ್ಲಿ ಕಬ್ಬು, ರೇಷ್ಮೆ, ಬಾಳೆ ಬೆಳೆದಿದ್ದೇನೆ. ಅನ್ನ ನೀಡುವ ಭೂಮಿಯನ್ನು ಮಾರಾಟ ಮಾಡಿ
ಮಣ್ಣು ತಿನ್ನಬೇಕಾಗುತ್ತದೆ’ ಎಂದು ತಿಳಿಸಿದರು.

‘ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಕೆಐಎಡಿಬಿ ಹಮ್ಮಿಕೊಂಡಿ ರುವ, ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನಿಗದಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ. ಬಲವಂತದಿಂದ ಭೂಮಿ ವಶಪಡಿಸಿಕೊಂಡರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬೊಕ್ಕಳ್ಳಿ ನಂಜುಂಡಸ್ವಾಮಿ, ಉಗ್ರ ನರಸಿಂಹೇಗೌಡ, ಕಂದೇಗಾಲ ಶ್ರೀನಿವಾಸ್, ಬಸವರಾಜು, ಬೊಕ್ಕಳ್ಳಿ ಮಾದೇವಸ್ವಾಮಿ, ವಿಜಯಕುಮಾರ್, ಆಕಾಶ್, ಶಶಿಧರ್, ಕಾರ್ಯ ಬಸವಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.