ADVERTISEMENT

ವೈಫೈ ಹಾಟ್‌ಸ್ಪಾಟ್‌ ಆಗಲಿದೆಯೇ ಮೈಸೂರು ಚಾಮುಂಡಿ ಬೆಟ್ಟ?: ನೂತನ ಪ್ರಸ್ತಾವ

ಸ್ಮಾರ್ಟ್‌ ಆಗುವ ಕನಸು ಹೊತ್ತ ನೂತನ ಪ್ರಸ್ತಾವ

ಕೆ.ಎಸ್.ಗಿರೀಶ್
Published 21 ನವೆಂಬರ್ 2021, 5:07 IST
Last Updated 21 ನವೆಂಬರ್ 2021, 5:07 IST
ಚಾಮುಂಡಿಬೆಟ್ಟದಲ್ಲಿ ಯುವಕರು
ಚಾಮುಂಡಿಬೆಟ್ಟದಲ್ಲಿ ಯುವಕರು   

ಮೈಸೂರು: ಭಕ್ತರ ಆರಾಧನೆಯ ಪುಣ್ಯ ಸ್ಥಳ ಹಾಗೂ ವಾಯುವಿಹಾರಿಗಳು, ಪರಿಸರಪ್ರಿಯರ ಅಚ್ಚುಮೆಚ್ಚಿನ ತಾಣವಾದ ಚಾಮುಂಡಿಬೆಟ್ಟ ವೈಫೈ ಹಾಟ್‌ಸ್ಪಾಟ್‌ ಆಗಿ ಬದಲಾವಣೆಯಾಗುವ ದಿನಗಳು ದೂರವಿಲ್ಲ.

ತೀರ್ಥಕ್ಷೇತ್ರಗಳ ಪುನಶ್ಚೇತನ, ಅಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆ (ಪ್ರಸಾದ)ಯಡಿ ರಾಜ್ಯಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಈ ಅಂಶವೂ ಇದೆ. ಒಂದು ವೇಳೆ ಇದಕ್ಕೆ ಒಪ್ಪಿಗೆ ದೊರೆತರೆ ಬೆಟ್ಟದ ಮೇಲೆ ಹಲವು ವೈಫೈ ಹಾಟ್‌ಸ್ಪಾಟ್‌ಗಳು ತಲೆ ಎತ್ತಲಿವೆ.

ಭಕ್ತಿಯ ಕೇಂದ್ರವಾದ ಬೆಟ್ಟದಲ್ಲಿ ಇಂತಹ ವೈಫೈ ಹಾಟ್‌ಸ್ಪಾಟ್‌ಗಳು ಏಕೆ ಬೇಕು ಎನ್ನುವ ಪ್ರಶ್ನೆ ಭಕ್ತರದ್ದು ಮಾತ್ರವಲ್ಲ ಸಾರ್ವಜನಿಕರದ್ದೂ ಆಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಚಾಮುಂಡೇಶ್ವರಿ ದೇಗುಲದ ಅರ್ಚಕರೊಬ್ಬರು ‘ಇಂತಹ ಹಾಟ್‌ಸ್ಪಾಟ್‌ಗಳು ಬೇಡ’ ಎಂದರು.

‘ಭಕ್ತರಿಗೆ ಅನುಕೂಲವಾಗುವ, ಅಧ್ಯಾತ್ಮವನ್ನು ಮತ್ತಷ್ಟು ವಿಸ್ತರಿಸುವ ಯೋಜನೆಗಳು ಬೇಕೇ ವಿನಹಾ ಇಂತಹ ಕುಲಗೇಡಿ ಯೋಜನೆಗಳಾದರೂ ಏಕೆ?’ ಎಂದು ಪ್ರಶ್ನಿಸಿದರು.

’ನೆಟ್‌ವರ್ಕ್ ಸಿಗಬಾರದು ಎಂದು ರೆಸಾರ್ಟ್‌ಗಳಲ್ಲಿ ಶಾಂತಿಯನ್ನು ಹರಸುವ ಹೊತ್ತಿನಲ್ಲಿ ನಿಜವಾದ ಶಾಂತಿ ನೀಡುವ ಬೆಟ್ಟಕ್ಕೆ ವೈಫೈ ಸಂಪರ್ಕ ನೀಡುವುದು ಸರಿಯಲ್ಲ’ ಎಂದು ಅವರು ಖಂಡಿಸಿದರು.

ಈಗಾಗಲೇ ಹಲವು ಯುವಕ, ಯುವತಿಯರು ಇಲ್ಲಿ ಕಾಲಕಳೆಯಲೆಂದು ಬರುತ್ತಾರೆ. ಬೆಟ್ಟದ ಮೂಲೆಮೂಲೆಗಳಲ್ಲೂ ನಿತ್ಯ ಕಾಣಸಿಗುತ್ತಾರೆ. ಉಚಿತ ವೈಫೈ ದೊರೆತರೆ ಇಂತಹವರ ಸಂಖ್ಯೆಯೇ ಭಕ್ತರಿಗಿಂತಲೂ ಹೆಚ್ಚಾಗುವ ಸಾಧ್ಯತೆಗಳಿವೆ.

ಪ್ರಸ್ತಾವದಲ್ಲಿ ‘ಸ್ಮಾರ್ಟ್ ಐಟಿ’ ಎಂಬ ಅಂಶವೂ ಇದೆ. ಆದರೆ ಯಾವ ಸ್ಮಾರ್ಟ್ ಐಟಿ ಯೋಜನೆಗಳು ಬರಲಿವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಬೆಟ್ಟಕ್ಕೆ ಪ್ರತಿ ಶುಕ್ರವಾರ ಬರುವ ಮಮತಾ, ‘ಭಕ್ತಿಯಿಂದ ದರ್ಶನ ಮಾಡಬೇಕಾದ ದೇವರ ಸನ್ನಿಧಿಯಲ್ಲಿ ವೈಫೈ ಸೌಲಭ್ಯ ನೀಡುವಂತಹ ಯೋಚನೆ ಸರ್ಕಾರಕ್ಕೆ ಏಕಾದರೂ ಬಂತು ಎಂದು ಅರ್ಥವಾಗುತ್ತಿಲ್ಲ. ವೈಫೈ ಬೇಕು ಎಂದು ಯಾವ ಭಕ್ತರು ಮನವಿ ಮಾಡಿದ್ದರು’ ಎಂದು ಪ್ರಶ್ನಿಸಿದರು.

‘ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಎಲ್ಲವೂ ಪ್ರಸ್ತಾವಗಳ ಹಂತದಲ್ಲೇ ಇದ್ದು, ಮುಂದೆ ಸಾಕಷ್ಟು ಬದಲಾವಣೆಗಳಾಗಲಿವೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.