ಹುಣಸೂರು: ಅರಣ್ಯದಂಚಿನ ಗ್ರಾಮ ಮತ್ತು ಪಟ್ಟಣದ ನಾಗರೀಕರಲ್ಲಿ ಅತಿ ಹೆಚ್ಚಿನ ಜಾಗೃತಿ ಹೊಂದಿ ಅರಣ್ಯ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.
71ನೇ ವನ್ಯಜೀವಿ ಸಪ್ತಾಹ ಅಂಗವಾಗಿ ನಗರದ ಪ್ರಾದೇಶಿಕ ಅರಣ್ಯ ಇಲಾಖೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದರೂ ಅರಣ್ಯದಂಚಿನಲ್ಲಿ ವಾಸಿಸುವ ಗ್ರಾಮ ಮತ್ತು ಪಟ್ಟಣದ ನಾಗರೀಕರಿಗೆ ಇತರರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ. ಅರಣ್ಯದಂಚಿನಲ್ಲಿ ನಿತ್ಯ ಮಾನವ ಪ್ರಾಣಿ ಸಂಘರ್ಷ ನಡೆದು ಇದರಲ್ಲಿ ಮೂಕ ಪ್ರಾಣಿಗಳು ಮನುಷ್ಯರ ಕೋಪಕ್ಕೆ ಬಲಿಯಾಗುತ್ತಿದೆ. ಇದರಿಂದ ಅರಣ್ಯದಲ್ಲಿ ಅಸಮತೋಲನ ಸಮಸ್ಯೆ ಎದುರಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಮಾನವ ಪ್ರಾಣಿ ಸಹಬಾಳ್ವೆ’ ಈ ಸಾಲಿನ ಘೊಷವಾಕ್ಯದಡಿ ಸಪ್ತಾಹ ನಡೆದಿದ್ದು, ಮನುಷ್ಯರಾದ ನಾವು ಅರಣ್ಯದಂಚಿನಲ್ಲಿ ಒತ್ತುವರಿ ಮಾಡಿ ಬದುಕು ಕಟ್ಟಿಕೊಳ್ಳುವುದರಿಂದ ಅರಣ್ಯ ಪ್ರದೇಶ ಕ್ಷೀಣಿಸಿ ವನ್ಯಪ್ರಾಣಿ ನಗರಪ್ರದೇಶಕ್ಕೆ ಮುಖ ಮಾಡಿದೆ. ಇದರಿಂದಾಗಿ ನಾಗರಹೊಳೆ, ಬಂಡೀಪುರ ಒಳಗೊಂಡಂತೆ ಎಲ್ಲಾ ಅರಣ್ಯ ಪ್ರದೇಶದಂಚಿನಲ್ಲಿ ಮಾನವ ಪ್ರಾಣಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂಘರ್ಷ ನಿಯಂತ್ರಣಕ್ಕೆ ನಾವು ಮೂಕ ಪ್ರಾಣಿಗಳಿಗೆ ತೊಂದರೆ ಆಗದಂತೆ ಬದುಕು ರೂಪಿಸಿಕೊಂಡು ವನ್ಯಪ್ರಾಣಿ ಸ್ನೇಹ ಜೀವನ ನಡೆಸಬೇಕಾದ ಅಗತ್ಯವಿದೆ’ ಎಂದರು.
‘ನಾಗರಹೊಳೆ ಅಭಯಾರಣ್ಯ 848 ಚ.ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಅರಣ್ಯದಲ್ಲಿ ವಿವಿಧ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಸಿಕ್ಕಿದೆ. ಇದರೊಂದಿಗೆ ಪರಿಸರಕ್ಕೆ ಪೂರಕವಾಗಿದ್ದು, ಮಳೆ ಸಕಾಲದಲ್ಲಿ ಬರುವಲ್ಲಿ ಜೀವ ವೈವಿಧ್ಯ ಹೊಂದಿದೆ. ಅರಣ್ಯಕ್ಕೆ ಹೊಂದಿಕೊಂಡಂತೆ ಕಬಿನಿ, ಲಕ್ಷ್ಮಣತೀರ್ಥ ಮತ್ತು ಕಾವೇರಿ ನದಿಗಳು ಇದ್ದು, ನದಿ ಸಂರಕ್ಷಣೆಯಲ್ಲೂ ಅರಣ್ಯ ಮಹತ್ವದ ಕಾರ್ಯನಿರ್ವಹಿಸಿದೆ’ ಎಂದರು.
ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ರವಿಶಂಕರ್, ನಾಗರಹೊಳೆ ಹುಲಿ ಯೋಜನಾ ನಿರ್ದೇಶಕಿ ಪಿ.ಎ.ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಫಯಾಜುದ್ದಿನ್, ಡಿವೈಎಸ್ಪಿ ಗೋಪಾಲಕೃಷ್ಣ, ಎಸಿಎಫ್ ಮಹದೇವಯ್ಯ, ಲಕ್ಷ್ಮಿಕಾಂತ್, ಆರ್‌ಎಫ್‌ಒಗಳಾದ ನಂದಕುಮಾರ್, ಹರಿಪ್ರಸಾದ್, ಪದ್ಮಶ್ರೀ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಮತ್ತು ಜ್ಞಾನಧಾರ ಹಾಗೂ ಶಾಸ್ತ್ರಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
4 ಕಿ.ಮಿ. ಕಾಲ್ನಡಿಗೆ ಜಾಥಾ ನದಿಗಳ ಸಂರಕ್ಷಣೆಯಲ್ಲೂ ಅರಣ್ಯದ ಪಾತ್ರ ಮಹತ್ವ ‘ಮಾನವ ಪ್ರಾಣಿ ಸಹಬಾಳ್ವೆ’ ಘೊಷವಾಕ್ಯ
ವಸ್ತುಪ್ರದರ್ಶನ: ಸಪ್ತಾಹದಲ್ಲಿ ಆನೆ ಕಾರ್ಯಪಡೆ ತಂಡದಿಂದ ಕಾಡಾನೆ ಹಿಡಿಯಲು ಬಳಸುವ ಅಸ್ತ್ರ ಮತ್ತು ವೈಜ್ಞಾನಿಕ ಉಪಕರಣ ಕುರಿತಂತೆ ಸಿಬ್ಬಂದಿ ಮಾಹಿತಿ ನೀಡಿದರು. ರತ್ನಾಪುರಿ ಗ್ರಾಮದಲ್ಲಿನ ಖಾಸಗಿ ಉರುಗ ತಜ್ಞ ಸಂಸ್ಥೆ ವತಿಯಿಂದ ಹಾವು ಕಡಿತಕ್ಕೆ ತೆಗೆದುಕೊಳ್ಳಬೇಕಾದ ಕ್ರಮ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ವನ್ಯಸಪ್ತಾಹದ ಅಂಗವಾಗಿ ಸಾರ್ವಜನಿಕರ ಗಮನ ಸೆಳೆಯುವ ಸಂಬಂಧ ಮಂಗಳೂರಿನಿಂದ ಹುಲಿ ಕುಣಿತ ವೇಷಧಾರಿಗಳನ್ನು ಆಹ್ವಾನಿಸಿದ್ದರು. ಹುಲಿ ಹೆಜ್ಜೆ ಜಾಥಾದ ಪ್ರಮುಖ ಆಕರ್ಷಣೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.