ADVERTISEMENT

ಚಳಿಗಾಲ: ಆರೋಗ್ಯ ರಕ್ಷಣೆಯೇ ಸವಾಲು

ಬದಲಾದ ತಾಪಮಾನದಿಂದ ಹೆಚ್ಚಿದ ವೈರಲ್ ಸೋಂಕು, ವೈಯಕ್ತಿಕ ಸ್ವಚ್ಛತೆಗೆ ಬೇಕು ಆದ್ಯತೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 5:58 IST
Last Updated 13 ಜನವರಿ 2025, 5:58 IST
<div class="paragraphs"><p>ಮೈಸೂರಿನ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ವಾಯುವಿಹಾರಿಗಳು ಬೆಚ್ಚನೆಯ ಉಡುಪು ಧರಿಸಿ ವಾಯುವಿಹಾರ ಮಾಡಿದರು.</p></div>

ಮೈಸೂರಿನ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ವಾಯುವಿಹಾರಿಗಳು ಬೆಚ್ಚನೆಯ ಉಡುಪು ಧರಿಸಿ ವಾಯುವಿಹಾರ ಮಾಡಿದರು.

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಜಿಲ್ಲೆಯಲ್ಲಿ ಮೈಕೊರೆವ ಚಳಿ ಆವರಿಸಿದ್ದು, ಎಲ್ಲೆಡೆ ನೆಗಡಿ, ಕೆಮ್ಮು, ಜ್ವರದ ಕಾರುಬಾರು ಶುರುವಾಗಿದೆ. ಚಳಿಗಾಲದಲ್ಲಿ ಉಂಟಾಗುವ ಚರ್ಮದ ಸಮಸ್ಯೆಗಳು ಜನರನ್ನು ಕಾಡುತ್ತಿವೆ.

ADVERTISEMENT

ಬಹುತೇಕ ಕ್ಲಿನಿಕ್‌, ಆಸ್ಪತ್ರೆಗಳಲ್ಲಿ ಜ್ವರ, ಶೀತ, ಕೆಮ್ಮಿಗೆ ಚಿಕಿತ್ಸೆಗೆಂದು ಬರುವ ರೋಗಿಗಳೇ ಹೆಚ್ಚಾಗಿ ಕಂಡುಬರುತ್ತಿದ್ದಾರೆ.

ಚಳಿಗಾಲ ಶುರುವಾದ ದಿನದಿಂದ ಜಿಲ್ಲೆಯಲ್ಲಿ ಚಳಿ ಜಾಸ್ತಿಯಾಗಿದೆ. ತಾಪಮಾನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದು, ಶೀತಗಾಳಿ ಹಾಗೂ ಮಂಜಿನಿಂದಾಗಿ ಚಳಿ ಹೆಚ್ಚುತ್ತಿದೆ. ತಾಪಮಾನದಲ್ಲಿನ ವ್ಯತಿರಿಕ್ತ ಏರುಪೇರು ವೈರಸ್‌ಗಳ ಬೆಳವಣಿಗೆಗೆ ಉತ್ತಮ ವಾತಾವರಣ ಸೃಷ್ಟಿಸಿದ್ದು, ವೈರಸ್‌ಗಳ ಸೋಂಕಿಗೆ ಜನರು ಒಳಗಾಗುತ್ತಿದ್ದಾರೆ.

ಸಣ್ಣಮಕ್ಕಳು, ಯುವಕರು, ವೃದ್ಧರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ವಾರದಲ್ಲಿಯೇ ಗುಣಮುಖರಾಗಬಹುದು. ಇಲ್ಲದಿದ್ದಲ್ಲಿ ಸೋಂಕು ಉಲ್ಬಣಿಸಿ ಸಮಸ್ಯೆ ಹೆಚ್ಚುತ್ತದೆ. ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ, ವೈದ್ಯರ ಬಳಿ ಚಿಕಿತ್ಸೆ ಪಡೆಯುವುದೇ ಸೂಕ್ತ ಎಂಬುದು ವೈದ್ಯರ ಸಲಹೆ.

‘ಚಳಿಗಾಲದಲ್ಲಿ ತಾಪಮಾನದಲ್ಲಿನ ಬದಲಾವಣೆಯಿಂದ ವೈರಸ್‌ಗಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ಇದು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡಿ ಶೀತ, ಕೆಮ್ಮಿನಂತಹ ಸೋಂಕಿಗೆ ಕಾರಣವಾಗುತ್ತದೆ. ಹೆಚ್ಚಿನ ಶೀತ, ಕೆಮ್ಮ ಜ್ವರ ಆವರಿಸಿಕೊಳ್ಳುತ್ತದೆ. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿದರೆ, ಸೋಂಕಿನಿಂದ ದೂರ ಇರಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ. ಈ ವೈರಲ್‌ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುತ್ತದೆ. ಆದ್ದರಿಂದ ಸೋಂಕಿತರು ಜನನಿಬೀಡಾದ ಸ್ಥಳಗಳಿಂದ ದೂರ ಇರುವುದು ಸೂಕ್ತ. ಅಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಕೊಳ್ಳುವ ಮೂಲಕ ಸೋಂಕಿಗೆ ಒಳಗಾಗುವುದರಿಂದ ಪಾರಾಗಬಹುದು’ ಎನ್ನುತ್ತಾರೆ ತಜ್ಞ ವೈದ್ಯರು.

ಜಿಲ್ಲೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ಮಂಜು ದಟ್ಟವಾಗಿ ಆವರಿಸುತ್ತಿದೆ. ಬೆಳಿಗ್ಗೆ ಒಂಬತ್ತಾದರೂ ಮಂಜಿನ ವಾತಾವರಣ ಇರುತ್ತಿದೆ. ನಿತ್ಯವೂ ವಾಯುವಿಹಾರ ಮಾಡುತ್ತಿದ್ದ ಬಹುತೇಕ ಜನರು, ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ವಾಯುವಿಹಾರಕ್ಕೆ ಹೋದರೂ ಬೆಚ್ಚಗಿನ ಉಡುಪಿನ ಮೊರೆ ಹೋಗುತ್ತಿದ್ದಾರೆ.

ವಾರದಿಂದ ನಗರದ ಕನಿಷ್ಠ ತಾಪಮಾನ ಸರಾಸರಿ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಇದೇ ರೀತಿ ಚಳಿಯ ವಾತಾವರಣ ಮುಂದುವರಿಯಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಚಳಿಯಲ್ಲಿಯೇ ಎದ್ದು ಹೊಲ– ಮನೆ ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶದ ಹೆಚ್ಚಿನ ಮಂದಿ, ಮಂಜಿನ ಪ್ರಮಾಣ ಕಡಿಮೆಯಾದ ನಂತರ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಬಹುತೇಕರು, ಸ್ವೆಟರ್‌, ಜರ್ಕಿನ್ ಹಾಕಿಕೊಳ್ಳುತ್ತಿದ್ದಾರೆ.

‘ಒಂದು ವಾರದಿಂದ ಮಗವಿಗೆ ಆರೋಗ್ಯದ ಸಮಸ್ಯೆ ಇದೆ. ಶೀತ, ಜ್ವರದಿಂದ ಬಳಲುತಿದ್ದು, ಚಿಕಿತ್ಸೆಗೆ ಬಂದಿರುವೆ’ ಎಂದು ಒಂಟಿಕೊಪ್ಪಲಿನ ನಿವಾಸಿ ಮಹೇಶ್‌ ಹೇಳಿದರು.

ಚಳಿಗಾಲದ ಸಮಸ್ಯೆಗಳು

ಚಳಿ, ಜ್ವರ, ಶೀತ, ಮೂಗು ಸೋರಿಕೆ, ಒಣ ಕೆಮ್ಮು, ಗಂಟಲು ಮತ್ತು ತಲೆ ನೋವು, ಅಲರ್ಜಿ, ತುರಿಕೆ

ಆರೋಗ್ಯ ರಕ್ಷಣೆ ಹೇಗೆ

  1. ಸಮತೋಲನ ಆಹಾರ ಸೇವಿಸಬೇಕು

  2. ಸರಿಯಾದ ಪ್ರಮಾಣದ ನೀರಿನ ಸೇವನೆ

  3. ದಿನನಿತ್ಯ ಲಘು ವ್ಯಾಯಾಮ

  4. ಬೆಚ್ಚಗಿನ ಉಡುಪು ಧರಿಸುವುದು

  5. ತೇವಾಂಶದ ದ್ರಾವಣ ಹಚ್ಚಿಕೊಳ್ಳುವುದು

  6. ಪದೇ ಪದೇ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳದಿರುವುದು

  7. ವೈದ್ಯರ ಸಲಹೆ ಮೇರೆಗೆ ಫ್ಲೋ ಚುಚ್ಚು ಮದ್ದು ಪಡೆಯುವುದು

ಆಹಾರ ಪದಾರ್ಥ ಕ್ರಮ

  1. ಬಿಸಿಯಾದ ತಾಜಾ ಆಹಾರ ಸೇವನೆ

  2. ಬೆಚ್ಚಗಿನ ನೀರು ಕುಡಿಯಬೇಕು

  3. ತರಕಾರಿ, ಸೊಪ್ಪು, ಮೊಳಕೆ ಕಾಳು ಹೆಚ್ಚಾಗಿ ಸೇವಿಸುವುದು

  4. ಶುಂಠಿ ಮತ್ತು ಜೀರಿಗೆ ಕಷಾಯ, ಅರಿಸಿನದೊಂದಿಗಿನ ಹಾಲು ಕುಡಿಯುವುದು

  5. ತಂಪು ಪಾನಿಯ, ಐಸ್‌ಕ್ರೀಂ ಹಾಗೂ ಎಣ್ಣೆ ಪದಾರ್ಥದಿಂದ ದೂರವಿರುವುದು

(ವೈದ್ಯರ ಸಲಹೆ)

ಮೈಸೂರು ನಗರದಲ್ಲಿ ಕುಕ್ಕರಹಳ್ಳಿಯಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ನಾಗರಿಕರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ನಗರದಲ್ಲಿ ಹಿಂದಿಗಿಂತಲೂ ಈ ಬಾರಿ ಚಳಿ ಜಾಸ್ತಿ ಇದೆ. ಬೆಳಿಗ್ಗೆಯ ವಾಯುವಿಹಾರ ಮಾಡುವುದು ಬಿಟ್ಟಿದ್ದು ಆರೋಗ್ಯ ದೃಷ್ಟಿಯಿಂದ ಸಂಜೆ ಮಾಡುತ್ತಿರುವೆ.
–ಸಿದ್ದರಾಮೇಗೌಡ, ಬೆಸ್ತಗೇರಿ ನಿವಾಸಿ
ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ಸವಲತ್ತುಗಳ ಸಮಸ್ಯೆ ಒಳ ಮತ್ತು ಹೊರ ರೋಗಿಗಳನ್ನು ಕಾಡುತ್ತಿದೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಹೊರ ರೋಗಿಗಳು ಸಾಲುಗಟ್ಟಿ ನಿಲ್ಲಲು ಅನಾನುಕೂಲವಿದೆ.
–ಕೆಂಪರಾಜು, ಬಲ್ಲೇನಹಳ್ಳಿ

‘ಆರೋಗ್ಯದ ಬಗ್ಗೆ ಗಮನವಿರಲಿ’

‘ಚಳಿಗಾಲದಲ್ಲಿ ಆರೋಗ್ಯದ ಸಮಸ್ಯೆ ಸಾಮಾನ್ಯ. ಈ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು. ಬದಲಾದ ಹವಾಮಾನಕ್ಕೆ ತಕ್ಕಂತೆ ಜನರಿಗೆ ಅನಾರೋಗ್ಯವೂ ಕಾಡುತ್ತದೆ. ನೆಗಡಿ ಕೆಮ್ಮು ಮೈಕೈನೋವು ಚರ್ಮ ಸುಕ್ಕುಗಟ್ಟುವುದು ತುರಿಕೆ ಮುಂತಾದ ಆರೋಗ್ಯ ಸಮಸ್ಯೆಗಳು ಚಳಿಗಾಲದಲ್ಲಿ ಕಾಡುತ್ತವೆ. ಚಳಿಗಾಲದ ನೆಗಡಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಮನೆಯ ಒಬ್ಬ ಸದಸ್ಯರಿಗೆ ಬಂದರೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಪರಸ್ಪರ ಅಂತರ ಪಾಲಿಸುವುದು ಮಾಸ್ಕ್‌ ಧರಿಸುವುದರ ಜತೆ ಆಗಿಂದಾಗ್ಗೆ ಕೈಗಳನ್ನು ತೊಳೆಯಬೇಕು. ತಲೆ ಮೇಲೆ ಮಂಜು ಬೀಳದಂತೆ ಎಚ್ಚರ ವಹಿಸಬೇಕು’ ಎಂದು ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಸಲಹೆ ನೀಡಿದರು.

ಎಚ್‌ಎಂಪಿವಿ ಭಯ ಬೇಡ: ಹ್ಯೂಮನ್‌ ಮೆಟಾನ್ಯೂಮೋ (ಎಚ್‌ಎಂಪಿವಿ) ಸಾಮಾನ್ಯ ವೈರಾಣು ಆಗಿದ್ದು ಗಾಬರಿಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಆತಂಕ ಬೇಡ. ಸುರಕ್ಷತೆ ವಹಿಸಬೇಕು ಎಂದರು.

‘ಮಕ್ಕಳ ಆರೋಗ್ಯ ಕಾಳಜಿ ಅಗತ್ಯ’

‘ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಳಜಿ ಅಗತ್ಯ’ ಎಂದು ಚಲುವಾಂಬ ಆಸ್ಪತ್ರೆ ಮಕ್ಕಳ ತಜ್ಞ ವೈದ್ಯೆ ಶ್ರುತಿ ಆರ್.ಎಸ್. ಹೇಳಿದರು. ‘ಚಳಿಗಾಲದಲ್ಲಿ ತೇವಾಂಶ ಕಡಿಮೆ ಇರುವ ಕಾರಣ ದೂಳಿನ ಕಣಗಳು ಶ್ವಾಸಕೋಶ ಮತ್ತಿತರ ಅಂಗ ಸೇರಿಕೊಂಡು ಸೋಂಕು ಉಂಟುಮಾಡುತ್ತದೆ. ಅದಕ್ಕಾಗಿ ಹೊರಗಡೆ ಓಡಾಡುವಾಗ ಎಚ್ಚರ ವಹಿಸಬೇಕು ದೇಹ ಮನೆ ಹಾಗೂ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಚಿಕ್ಕ ಮಕ್ಕಳಿಗೆ ಬೆಚ್ಚನೆಯ ಉಡುಪುಗಳನ್ನು ಹಾಕಬೇಕು’ ಎಂದು ಸಲಹೆ ನೀಡಿದರು.

‘ಚರ್ಮಕ್ಕೆ ತೇವಾಂಶದ ದ್ರಾವಣ ಹಚ್ಚಿ’

ಚಳಿಗಾಲದಲ್ಲಿ ಮುಖ್ಯವಾಗಿ ಚರ್ಮದ ಸಮಸ್ಯೆ ಹೆಚ್ಚು. ಶೀತಲವಾದ ಒಣಗಾಳಿ ಚರ್ಮವನ್ನು ಒಣಗಿಸುತ್ತದೆ. ತುಟಿ ಬಿರಿಯುತ್ತದೆ. ಪಾದ ಒಡೆಯುತ್ತದೆ. ಅಲರ್ಜಿಯಿಂದ ತುರಿಕೆ ಸಮಸ್ಯೆಯೂ ಕಾಡುತ್ತದೆ. ಕೆರೆತದಿಂದ ಗಾಯಗಳಾಗುತ್ತದೆ ಎಂದು ಕೆ.ಆರ್.ಆಸ್ಪತ್ರೆ ಚರ್ಮರೋಗ ತಜ್ಞ ಸತೀಶ್‌ ತಿಳಿಸಿದರು.

ಚರ್ಮಕ್ಕೆ ತೇವಾಂಶದ ದ್ರಾವಣ ಹಚ್ಚಬೇಕು. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಸೋಕಿಸಬೇಕು. ಶೀತಲ ಗಾಳಿ ಹಾಗೂ ಚಳಿ ನಿವಾರಿಸಲು ಬೆಚ್ಚಗಿನ ವಸ್ತ್ರಗಳನ್ನು ಧರಿಸಬೇಕು ಎಂದು ಸಲಹೆ ನೀಡಿದರು. ಅಂತೆಯೇ ಚಳಿಗಾಲದಲ್ಲಿ ಸೋರಿಯಾಸಿಸ್ ಇಕ್ಥಿಯೋಸಿಸ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹಸ್ತ ಪಾದ ಮತ್ತು ಬಾಯಿಯ ಸೋಂಕು ಚಿಕನ್ ಪಾಕ್ಸ್ ಸೋಂಕು ಚಳಿಗಾಲದಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳಲಿದೆ. ಇವುಗಳಿಗೆ ವೈದ್ಯರ ಸಲಹೆ ಮೇರೆಗೆ ಔಷಧ ಪಡೆಯಬೇಕು ಎಂದು ಸಲಹೆ ನೀಡಿದರು.

‘ಸಂಜೆ ವಾಯುವಿಹಾರ ಒಳ್ಳೆಯದು’

‘ಚಳಿಗಾಲದಲ್ಲಿ ಮಕ್ಕಳು ಹಾಗೂ ವೃದ್ಧರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಎಲ್ಲರೂ ಬೆಚ್ಚಗಿನ ಉಡುಗೆ ತೊಡಬೇಕು. ಬೆಳಿಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ಆದಷ್ಟು ಮನೆಯೊಳಗಿರಬೇಕು. ವಾಯು ವಿಹಾರ ಮಾಡುವವರು ಬೆಳಿಗ್ಗೆ ಬದಲು ಸಂಜೆ ಮಾಡಿದರೆ ಒಳ್ಳೆಯದು. ತಣ್ಣನೆಯ ವಾತಾವರಣದಿಂದ ರಕ್ತ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಆರೋಗ್ಯ ಸಮಸ್ಯೆಗಳು ಉಂಟಾದರೆ ಕೂಡಲೇ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು’ ಎಂದು ಕೆ.ಆರ್.ಆಸ್ಪತ್ರೆಯ ತಜ್ಞ ವೈದ್ಯ ಎಲ್‌.ವಿಕಾಸ ಹೇಳಿದರು.

‘ಉಸಿರಾಟದ ತೊಂದರೆ ಸಾಧ್ಯತೆ ಹೆಚ್ಚು’

ಹುಣಸೂರು: ಚಳಿಗಾಲದಲ್ಲಿ ಸಾಮಾನ್ಯವಾಗಿ ಶೀತ ಮತ್ತು ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 5 ವರ್ಷದ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುವರು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ್. ಶೀತದಿಂದ ವೈರಲ್ ಹರಡುವುದು ಸಾಮಾನ್ಯ.

ಚಳಿಗಾಲದಲ್ಲಿ ಧೂಮಪಾನಿಗಳು ಹೃದಯ ಸಂಬಂಧ ಕಾಯಿಲೆ ಸಕ್ಕರೆ ಕಾಯಿಲೆ ಮತ್ತು ಮೂತ್ರಪಿಂಡ ಕಾಯಿಲೆಯಿಂದ ಬಳಲುವವರು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆಸ್ಪತ್ರೆಗೆ ಪರಿಸರ ಬದಲಾವಣೆಯಿಂದ ಹೊರರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ಯಾರಿಗೂ ಗಂಭೀರ ಸ್ವರೂಪದ ಸಮಸ್ಯೆ ಕಾಣಿಸಿಕೊಂಡಿಲ್ಲ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಶೀತ ಕೆಮ್ಮು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲು ದಾಸ್ತಾನು ಇಲ್ಲ. ಕೇಂದ್ರ ದಾಸ್ತಾನು ಘಟಕಕ್ಕೆ ಬೇಡಿಕೆ ಸಲ್ಲಿಸಿದ್ದು ವಾರದೊಳಗೆ ಬರುವ ನಿರೀಕ್ಷೆ ಇದೆ. ತಾತ್ಕಾಲಿಕವಾಗಿ ರಕ್ಷಾ ಸಮಿತಿಯಿಂದ ₹ 10 ಸಾವಿರ ಅನುದಾನದಲ್ಲಿ ಔಷಧಿ ವಿತರಿಸಿದೆ ಎಂದು ಔಷಧಿ ವಿಭಾಗದ ಮುಖ್ಯಸ್ಥ ಪ್ರಶಾಂತ್ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.