ADVERTISEMENT

ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲ: ಮುರುಘಾ ಶರಣರ 2ನೇ ಪ್ರಕರಣದ ಸಂತ್ರಸ್ತೆ ತಾಯಿ

ಮುರುಘಾ ಶರಣರ ವಿರುದ್ಧ ಎರಡನೇ ಪ್ರಕರಣದ ಸಂತ್ರಸ್ತೆ ತಾಯಿ ಪ್ರತಿಪಾದನೆ

ಕೆ.ನರಸಿಂಹ ಮೂರ್ತಿ
Published 16 ಡಿಸೆಂಬರ್ 2022, 14:44 IST
Last Updated 16 ಡಿಸೆಂಬರ್ 2022, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಎರಡನೇ ಪೋಕ್ಸೊ ಪ್ರಕರಣದ ಸಂತ್ರಸ್ತೆ ತಾಯಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಾತ್ಕಾಲಿಕ ಉದ್ಯೋಗದ ಭರವಸೆ ನೀಡಿದೆ. ಆದರೆ, ‘ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲದಿರುವುದರಿಂದ ಅಲ್ಲಿಗೆ ತೆರಳಲಾರೆ’ ಎಂದು ತಾಯಿ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದಾರೆ. ಈಗ ವಾಸ್ತವ್ಯವಿರುವ ಒಡನಾಡಿ ಸೇವಾ ಸಂಸ್ಥೆಯಲ್ಲೇ ಉಳಿಯುವುದಾಗಿಯೂ ಪ್ರತಿಪಾದಿಸಿದ್ದಾರೆ.

ಡಿ.12ರಂದು ಸಮಿತಿಗೆ ಪತ್ರ ಬರೆದಿರುವ ಇಲಾಖೆಯ ಚಿತ್ರದುರ್ಗದ ಉಪನಿರ್ದೇಶಕರು, ಸಂತ್ರಸ್ತೆ ತಾಯಿಯ ಮನವಿ ಮೇರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅವರ ಮಕ್ಕಳಿಗೆ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಿದೆ. ತಾಯಿಗೆ ಹೊರಗುತ್ತಿಗೆ ಕೆಲಸವನ್ನೂ ನೀಡಲಿದೆ. ಈ ಬಗ್ಗೆ, ಸಂಸ್ಥೆಯಲ್ಲಿರುವ ತಾಯಿ, ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೋರಿತ್ತು.

ಅದರ ಅನ್ವಯ ಗುರುವಾರ ಸಂಸ್ಥೆಗೆ ತೆರಳಿದ ಸಮಿತಿಯೊಂದಿಗೆ ಮಾತನಾಡಿದ ತಾಯಿಯು, ‘ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲ. ಹೀಗಾಗಿ ಅಲ್ಲಿಗೆ ಹೋಗಲಾರೆ. ಮಕ್ಕಳಿಗೆ ಶಾಲೆ ಮತ್ತು ತನಗೆ ಉದ್ಯೋಗ ದೊರಕಿಸಬೇಕೆಂದು ಮನವಿ ಮಾಡಿದ್ದು ಆಗಸ್ಟ್‌ನಲ್ಲಿ. ಆಗ ಚಿತ್ರದುರ್ಗ ಜಿಲ್ಲಾಡಳಿತ ಸ್ಪಂದಿಸಲಿಲ್ಲ. ಈಗ ಒಡನಾಡಿಯೇ ಮಕ್ಕಳನ್ನು ಶಾಲೆಗೆ ಸೇರಿಸಿದೆ. ಇಲ್ಲಿ ಭದ್ರತೆಯೂ ಇರುವುದರಿಂದ ಹೋಗಲಾರೆ ಎಂದು ತಿಳಿಸಿದ್ದಾರೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ADVERTISEMENT

‘ವಿಚಾರಣೆ ನೆಪದಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದ ಪೊಲೀಸರು ಪರೋಕ್ಷವಾಗಿ ದೂರನ್ನು ವಾಪಸು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಆತಂಕ, ಅಭದ್ರತೆಯ ಕಾರಣಕ್ಕೆ ಮೂರು ದಿನ ಉಪವಾಸವನ್ನೂ ಮಾಡಿದ್ದೆ. ನಂತರ ಒಡನಾಡಿ ಸಂಸ್ಥೆಯವರ ಮೂಲಕವೇ ನನ್ನನ್ನು ಮೈಸೂರಿಗೆ ಕಳುಹಿಸಿಕೊಟ್ಟರು’ ಎಂದೂ ಸಮಿತಿಗೆ ತಿಳಿಸಿದ್ದಾರೆಂದು ಗೊತ್ತಾಗಿದೆ. ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಸಮಿತಿಯು ಚಿತ್ರದುರ್ಗದ ಮಕ್ಕಳ ರಕ್ಷಣಾ ಘಟಕಕ್ಕೆ ಅದನ್ನು ಕಳಿಸಲು ಸಿದ್ಧತೆ ನಡೆಸಿದೆ.

ಈ ನಡುವೆ, ತಾಯಿಯು ಮೈಸೂರಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ಶುಕ್ರವಾರ ಪತ್ರ ಬರೆದಿದ್ದು, ‘ಒಡನಾಡಿ ಸಂಸ್ಥೆಯಲ್ಲೇ ಉಳಿದುಕೊಳ್ಳಲು ಅವಕಾಶ ನೀಡಬೇಕು. ಕಾಯಂ ಉದ್ಯೋಗದ ಜೊತೆಗೆ ಚಿತ್ರದುರ್ಗದಲ್ಲಿ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು’ ಎಂದೂ ಕೋರಿದ್ದಾರೆ.

ತನಿಖೆ ನಡೆಸಿ: ಚಿತ್ರದುರ್ಗ ಡಿ.ಸಿಗೆ ಪತ್ರ

‘ಮುರುಘಾ ಮಠದಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿರುವ ಕುರಿತು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಬೇಕು’ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆಗಿರುವ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಡಿ.14ರಂದು ಪತ್ರ ಬರೆದಿದೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಆಯೋಗದ ಅಧ್ಯಕ್ಷರು ನ.9ರಂದು ಬರೆದಿದ್ದ ಪತ್ರ ಹಾಗೂ ಒಡನಾಡಿ ಸಂಸ್ಥೆಯು ಸಲ್ಲಿಸಿದ್ದ ದೂರು ಅರ್ಜಿಯ ಕುರಿತು ಉಲ್ಲೇಖಿಸಿರುವ ನಿರ್ದೇಶನಾಲಯವು ಸಮಿತಿ, ಘಟಕವನ್ನು ನಿಯಮಾನುಸಾರ ವಿಚಾರಣೆಗೆ ಒಳಪಡಿಸಬೇಕು’ ಎಂದು ತಿಳಿಸಿದೆ.

‘ಪ್ರಕರಣದಿಂದ ಹಿಂದೆ ಸರಿಸುವ ಹುನ್ನಾರ’

ಮೈಸೂರು: ‘ಸಂತ್ರಸ್ತೆ ತಾಯಿಯ ವಿರುದ್ಧ ಪಿತೂರಿ ಪ್ರಕರಣ ದಾಖಲಿಸಿರುವ ಸರ್ಕಾರವು ಆಕೆಗೆ ಉದ್ಯೋಗ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಇದು ಇಬ್ಬಂದಿತನ, ವೈರುಧ್ಯ. ಪ್ರಕರಣದಿಂದ ತಾಯಿ, ಮಕ್ಕಳನ್ನು ಹಿಂದೆ ಸರಿಸುವ ಹುನ್ನಾರ’ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಎಂ.ಎಲ್‌.ಪರಶುರಾಂ ಮತ್ತು ಸ್ಟ್ಯಾನ್ಲಿ ಆರೋಪಿಸಿದ್ದಾರೆ.

‘ರಾಷ್ಟ್ರಪತಿಗೆ ಪತ್ರ ಬರೆದರೆಂಬ ಕಾರಣಕ್ಕೆ ತಾಯಿಯನ್ನು ಓಲೈಸಲಾಗುತ್ತಿದೆ. ದೊಡ್ಡ ಮಟ್ಟದ ತನಿಖೆಯಾದರೆ ಘಟಕ ಮತ್ತು ಸಮಿತಿಯ ಹಲವರ ತಪ್ಪುಗಳು ಹೊರಬೀಳಬಹುದೆಂಬ ಆತಂಕವೂ ಅದಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.