
ಹುಣಸೂರು: ಮಹಿಳೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ವಿಷಯವನ್ನು ಅರಿತು ಜಾಗೃತರಾಗಿರಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತ ರಾವ್ ಹೇಳಿದರು.
ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ವಿಭಾಗದಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮಹಿಳೆ ನಿಶ್ಚಿಂತೆಯಿಂದ ತನ್ನ ಬದುಕು ಕಟ್ಟಿಕೊಳ್ಳಲು ಲೋಕ ಜ್ಞಾನ ಹೊಂದಿರಬೇಕು. ಈ ಕಾರಣದಿಂದಾಗಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಜ್ಞಾನ ಕುರಿತಂತೆ ಮಾಹಿತಿ ನೀಡಿ ಜಾಗೃತಿಗೊಳಿಸುತ್ತಿದೆ ಎಂದರು.
ಕುಟುಂಬ ನೆಮ್ಮದಿಯಿಂದ ಇರಲು ಸಾಮರಸ್ಯ, ಸಂಬಂಧಗಳನ್ನು ಗಟ್ಟಿಗೊಳಿಸುವುದು, ಸೂಕ್ಷ್ಮ ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ನಿರ್ವಹಣೆ ಮಾಡುವ ಕೌಶಲ ಇರಬೇಕು. ಕುಟುಂಬದ ಆರ್ಥಿಕ ಶಕ್ತಿ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಹೆಚ್ಚಿದ್ದು, ಈ ವಿಷಯದಲ್ಲಿ ಯಾರಿಗೂ ಅನುಮಾನ ಅಥವಾ ಅಪನಂಬಿಕೆ ಬಾರದ ರೀತಿ ಎಲ್ಲರೊಂದಿಗೆ ಒಗ್ಗೂಡಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಕೂಟ ಜಾಗೃತಿಗೊಳಿಸಿದೆ ಎಂದರು.
ಮಹಿಳೆ ಮತ್ತು ಶಿಕ್ಷಣ: ಸಾಮಾಜಿಕ ಜಾಗೃತಿ ಹೊಂದಿದ್ದರೂ ವ್ಯವಹಾರಿಕವಾಗಿ ಸದೃಢ ತೀರ್ಮಾನ ತೆಗೆದುಕೊಳ್ಳಲು ಶಿಕ್ಷಣ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಕ್ಕಳು ಶಾಲೆಗೆ ಗೈರಾದಲ್ಲಿ ಪ್ರಶ್ನಿಸದ ವಾತಾವರಣ ಇರುವುದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಶಾಲೆಗಳಲ್ಲಿ ನಡೆಯುವ ಪೋಷಕರ ಸಭೆಗೆ ಕಡ್ಡಾಯವಾಗಿ ಭೇಟಿ ನೀಡಿ ನಮ್ಮ ಮಕ್ಕಳ ಕಲಿಕಾ ಸಾಮರ್ಥ್ಯ ಕುರಿತು ತಿಳಿಯಬೇಕಿದೆ. ಮಹಿಳೆ ಶಿಕ್ಷಣಕ್ಕೆ ಒತ್ತು ನೀಡುವುದರಿಂದ ಒಂದು ಕುಟುಂಬದ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಪವಿತ್ರ, ವೈದ್ಯರಾದ ಡಾ.ಕಿರಣ್ , ಡಾ.ಮಿತಿಲ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ನಂದಿನಿ ಮಾಲತೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.
‘ಮಕ್ಕಳಿಗೆ ವಾಹನ ನೀಡುವುದು ಅಪರಾಧ’
ಪೊಲೀಸ್ ಇನ್‌ಸ್ಪೆಕ್ಟರ್ ರಾಧಾ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು ಮಹಿಳೆಯರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳು ವಯಸ್ಸಿಗೆ ಬಾರದೆ ವಿವಾಹ ಮಾಡುವುದರಿಂದ ದೈಹಿಕವಾಗಿ ಸೊರಗುವರು. ಇದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಾರೆ. ಸರ್ಕಾರ 18 ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡದಂತೆ ಕಾನೂನು ರೂಪಿಸಿದೆ. ಮಹಿಳೆಯರಾಗಿ ನಾವು ಈ ರೀತಿಯ ತಪ್ಪುಗಳಿಗೆ ಬೆಂಬಲ ನೀಡದೆ ಇವುಗಳನ್ನು ತಡೆಯುವ ದಿಕ್ಕಿನಲ್ಲಿ ಜಾಗೃತರಾಗಬೇಕು ಎಂದು ಮನವಿ ಮಾಡಿದರು. 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನ ನೀಡುವುದು ಅಪರಾಧ. ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಪೋಷಕರ ಮೇಲೆ ಪ್ರಕರಣ ದಾಖಲು ಹಾಗೂ ₹ 25 ಸಾವಿರ ದಂಡ ವಿಧಿಸಲಾಗುವುದು. ಪೋಷಕರು ಈ ಸಂಬಂಧ ಗಂಭೀರವಾಗಿ ಆಲೋಚಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.