ADVERTISEMENT

ಸ್ತ್ರೀಗೆ ಸಾಂವಿಧಾನಿಕ ರಕ್ಷಣೆ ಅಗತ್ಯ: ಬಿ.ಜಿ. ದಿನೇಶ್

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:50 IST
Last Updated 13 ಏಪ್ರಿಲ್ 2025, 15:50 IST
ಮೈಸೂರಿನ ಬೋಗಾದಿಯ ‘ಕ್ರಿಯಾ’ ಸಂಸ್ಥೆಯಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಉದ್ಘಾಟಿಸಿದರು
ಮೈಸೂರಿನ ಬೋಗಾದಿಯ ‘ಕ್ರಿಯಾ’ ಸಂಸ್ಥೆಯಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಉದ್ಘಾಟಿಸಿದರು   

ಮೈಸೂರು: ‘ಅನೇಕ ಯೋಜನೆಗಳ ಸವಲತ್ತುಗಳು ಇದ್ದಾಗ್ಯೂ ಮಹಿಳೆಯರು ಈಗಲೂ ಅಸುರಕ್ಷತೆಯ ವಲಯದಲ್ಲೇ ಇರುವುದರಿಂದ ಅವರಿಗೆ ಸಾಂವಿಧಾನಿಕ ರಕ್ಷಣೆಯ ಅಗತ್ಯವಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಹೇಳಿದರು.

‘ಕ್ರಿಯಾ’ ಸಂಸ್ಥೆಯು ಬೋಗಾದಿಯ ಕ್ರಿಯಾ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಕ್ರಿಯಾ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ನೀಡುವುದಕ್ಕೆ ಬದಲಾಗಿ, ಅವರಿಗೆ ಸಂವಿಧಾನದ ಪ್ರಕಾರ ಸಮಾನತೆ ನೀಡಿದರೆ ಸಾಕು. ಇದರಿಂದ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು. 

ADVERTISEMENT

‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ಸೇವೆ ಒದಗಿಸಲಾಗುತ್ತಿದೆ. ಈ ಸೇವೆಯನ್ನು ಅಗತ್ಯವಿರುವವರು ಬಳಸಿಕೊಳ್ಳಬೇಕು’ ಎಂದು ಕೋರಿದರು.

ಮುಖ್ಯ ಅತಿಥಿಯಾಗಿದ್ದ ಲೇಖಕಿ ಮಂಜುಳಾ ಮಾನಸ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ಅಂತಃಶಕ್ತಿಯಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಒಳಿತಿಗೆ ದುಡಿಯಬೇಕು. ಆಗ ಅದು ಸಾಧನೆಯಾಗುತ್ತದೆ. ನಾವು ಸಮಾಜಮುಖಿಯಾಗಿ ಕೆಲಸ ಮಾಡಿದರೆ, ನಮ್ಮೊಳಗೆ ಗಾಂಧಿ, ಬುದ್ಧ, ಬಸವ ನೆಲೆಸುತ್ತಾರೆ. ಆಗ ಸಾಂಸ್ಕೃತಿಕ ಗಟ್ಟಿತನ ದೊರಕುತ್ತದೆ’ ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಶೂದ್ರ ವರ್ಗದ ಅಪ್ರಾಪ್ತ ಹೆಣ್ಣು ಮಕ್ಕಳ ಮಾರಾಟ ದಂಧೆ ನಿರಂತರವಾಗಿ ನಡೆದಿದೆ. ಇದರಲ್ಲಿ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ’ ಎಂದು ಆತಂಕ ವ್ಯಕ್ತಪಡಿಸಿದ ಅವರು, ‘ಮಹಿಳೆ ಮತ್ತು ಮಕ್ಕಳ ಪರವಾಗಿ ಇರುವ ಕಾನೂನುಗಳ ನೆರವು ಪಡೆದು, ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಬೇಕಿದೆ’ ಎಂದರು.

‘ಕ್ರಿಯಾ’ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು, ಕವಿ ಟಿ. ಸತೀಶ್‌ ಜವರೇಗೌಡ, ಪ್ರಾಧ್ಯಾಪಕ ಮಲ್ಲಿಕಾರ್ಜುನ‌ ಹಿರೇಮಠ, ಪಿ.ಎನ್. ಹೇಮಚಂದ್ರ, ‘ಕ್ರಿಯಾ’ ಪ್ರಧಾನ ಸಂಚಾಲಕರಾದ ಮಂದಾರ ಎಸ್. ಉಡುಪಿ, ರಾಜೀವ್ ಶರ್ಮ‌ ಮಾತನಾಡಿದರು.

ಸಂಚಾಲಕಿ ಸುಪ್ರಿಯಾ ಶಿವಣ್ಣ, ಲೇಖಕ‌ ನೀ. ಗೂ. ರಮೇಶ್, ಎಸ್.ಎಲ್. ಆನಂದ್, ಬಿ. ಕುಮಾರ್, ಬಿ. ರೇಖಾ, ಕೆ. ಲೋಕೇಶ್, ಬಿ. ಪುನೀತ್‌ ಕುಮಾರ್ ಹಾಗೂ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.