ADVERTISEMENT

ಕನ್ನಡ ವಿಮುಖ ಧೋರಣೆ ಹೊಂದಿರುವ ಕಸಾಪ: ಸಾಹಿತಿ ಬನ್ನೂರು ಕೆ.ರಾಜು ವಿಷಾದ

​ಪ್ರಜಾವಾಣಿ ವಾರ್ತೆ
Published 21 ಮೇ 2019, 12:31 IST
Last Updated 21 ಮೇ 2019, 12:31 IST
ಮೈಸೂರು ಕನ್ನಡ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ‘ಕಾಯಕಯೋಗಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಮೈಸೂರು ಕನ್ನಡ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ‘ಕಾಯಕಯೋಗಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಮೈಸೂರು: ಈಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ವಿಮುಖ ಧೋರಣೆಯನ್ನು ಹೊಂದುತ್ತಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ವಿಷಾದ ವ್ಯಕ್ತಪಡಿಸಿದರು.

ಮೈಸೂರು ಕನ್ನಡ ವೇದಿಕೆಯು ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಮಿಕರ ದಿನ ಅಂಗವಾಗಿ ಸಾಧಕರಿಗೆ ‘ಕಾಯಕಯೋಗಿ ‍‍ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆಯಾಗಿರುವ ಆಶಯ ಕೇವಲ ಸಾಹಿತ್ಯದ ಪ್ರಚಾರವಲ್ಲ. ಕನ್ನಡದ ಅಭಿವೃದ್ಧಿ. ಆದರೆ, ‘ಕಸಾಪ’ ಇದುವರೆಗೆ ಒಂದಾದರೂ ಕನ್ನಡ ಮಾಧ್ಯಮ ಶಾಲೆಯನ್ನು ಸ್ಥಾಪಿಸಿಲ್ಲ. ದುರಂತವೆಂದರೆ, ಬೆಂಗಳೂರಿನ ‘ಕಸಾಪ’ ಮುಖ್ಯ ಕಚೇರಿಯ ಪಕ್ಕದಲ್ಲೇ ಇದ್ದ ಕನ್ನಡ ಮಾಧ್ಯಮ ಶಾಲೆ ಮುಚ್ಚಿ ಹೋಗಿದೆ ಎಂದು ಉದಾಹರಿಸಿ ವಿಶ್ಲೇಷಿಸಿದರು.

ADVERTISEMENT

‘ಅಧಿಕಾರ ಚುಕ್ಕಾಣಿ ಹಿಡಿದಿರುವವರು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ತಮ್ಮದೇ ಕೂಟವನ್ನು ನಿರ್ಮಿಸಿಕೊಂಡು ಹಣ ಮಾಡಲು ಇಳಿದಿದ್ದಾರೆ. ‘ಕಸಾಪ’ ಬೈಲಾಗೆ ತಿದ್ದುಪಡಿ ತರುವ ಮೂಲಕ 3 ವರ್ಷವಿದ್ದ ಅಧಿಕಾರಾವಧಿಯನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡಿದ್ದಾರೆ. ₹ 250 ಇದ್ದ ಆಜೀವ ಶುಲ್ಕವನ್ನು ₹ 1 ಸಾವಿರಕ್ಕೆ ಏರಿಸಿದ್ದಾರೆ. ₹ 100 ಇದ್ದ ಸಾಮಾನ್ಯ ಶುಲ್ಕವನ್ನು ರದ್ದುಪಡಿಸಿದ್ದಾರೆ. ಈ ಮೂಲಕ ‘ಕಸಾಪ’ ಶ್ರೀಸಾಮಾನ್ಯರಿಗಲ್ಲ ಎನ್ನುವಂತೆ ಮಾಡಿದ್ದಾರೆ’ ಎಂದು ದೂರಿದರು.

ಕೋರ್ಟ್ ಮೆಟ್ಟಿಲೇರುವಂತೆ ಮಾಡಿದರು: ‘ಕಸಾಪ’ ಇದುವರೆಗೆ ನ್ಯಾಯಾಲಯದ ಮೆಟ್ಟಿಲು ಏರಿರಲಿಲ್ಲ. ಇದೀಗ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವುದಾಗಿ ಆರೋಪಿಸಿ ಹಲವರು ದೂರು ನೀಡಿದ್ದಾರೆ. ವಿಚಾರಣೆ ಮುಗಿದಿದ್ದು, ಮತ ಎಣಿಕೆ ನಂತರ ನ್ಯಾಯಾಲಯದ ತೀರ್ಪು ಹೊರಬರಲಿದೆ. ಕನ್ನಡ ವಿರೋಧಿ ನೀತಿ ಕೇವಲ ರಾಜ್ಯ ಘಟಕಕ್ಕೆ ಮೀಸಲಾಗಿಲ್ಲ. ಜಿಲ್ಲಾ ಘಟಕಗಳೂ ಸೇರಿವೆ ಎಂದು ಆರೋಪಿಸಿದರು.

ಹಣ ಮಾಡುವ ಮಾರ್ಗ: ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕವನ್ನು ಇದುವರೆಗೂ ನೀಡಿಲ್ಲ. ಪಾರದರ್ಶಕತೆ ಇದ್ದಿದ್ದರೆ ಮೊದಲು ಲೆಕ್ಕ ನೀಡುತ್ತಿದ್ದರು ಎಂದರು.

‘ಹಲವು ಸಾಹಿತಿಗಳು ‘ಕಸಾಪ’ ಕಟ್ಟಲು ತಮ್ಮ ಜೀವನವನ್ನೇ ಸವೆಸಿದ್ದಾರೆ. ಆದರೆ, ಈಗಿರುವ ಪದಾಧಿಕಾರಿಗಳು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡುವಂತೆ ಆಗಿದೆ’ ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕಿ ಬಿ.ಆರ್‌.ಸವಿತಾ, ವರದಿಗಾರ ಜಿ.ಜಯಂತ್, ಕೂಲಿ ಕಾರ್ಮಿಕ ಭೈರಪ್ಪ, ಟೈಲರ್‌ ರೇಣುಕಾ, ಮೆಕ್ಯಾನಿಕ್ ಶರವಣ, ಕಾಂಗ್ರೆಸ್ ಮಾಧ್ಯಮ ವಕ್ತಾರ ಕೆ.ಮಹೇಶ್‌, ಮೊಬೈಲ್ ದುರಸ್ತಿಕಾರ ಸತೀಶ್, ನಲ್ಲಿ ಕಾರ್ಮಿಕ ಎಂ.ಮಹೇಶ್‌ ಅವರಿಗೆ ‘ಕಾಯಕಯೋಗಿ ಪ್ರಶಸ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರಪಾಲಿಕೆ ಸದಸ್ಯ ಎಸ್‌.ಬಿ.ಎಂ.ಮಂಜು, ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಪ್ಪ, ಸಾಹಿತಿ ಮುನಿವೆಂಕಟಪ್ಪ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.