ADVERTISEMENT

ಮೈಸೂರು: ಲೇಖಕ ಪ್ರೊ.ಕೆ.ಭೈರವಮೂರ್ತಿ ನಿಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 5:07 IST
Last Updated 1 ಮಾರ್ಚ್ 2022, 5:07 IST
ಲೇಖಕ ಪ್ರೊ.ಕೆ.ಭೈರವಮೂರ್ತಿ
ಲೇಖಕ ಪ್ರೊ.ಕೆ.ಭೈರವಮೂರ್ತಿ   

ಮೈಸೂರು: ಲೇಖಕ ಪ್ರೊ.ಕೆ.ಭೈರವಮೂರ್ತಿ (77) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ ಒಬ್ಬ ಪುತ್ರ ಇದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ ನಡೆಯಲಿದೆ.

ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಂತೆ ಕಸಲಗೆರೆ ಗ್ರಾಮದಲ್ಲಿ 1945ರ ಮೇ 30 ರಂದು ಜನಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮೂರನೆಯ ರ‍್ಯಾಂಕ್‌ನೊಂದಿಗೆಪಡೆದಿದ್ದರು.

ಜಿ.ಎಸ್. ಶಿವರುದ್ರಪ್ಪ, ದೇಜಗೌ, ಸಿಪಿಕೆ, ಎಚ್. ತಿಪ್ಪೇರುದ್ರಸ್ವಾಮಿ, ಮೊದಲಾದವರುಭೈರವಮೂರ್ತಿ ಅವರ ಮೇಲೆ ಪ್ರಭಾವ ಬೀರಿದ ಗುರುಗಳು.

ADVERTISEMENT

1969ರಿಂದ ಮೈಸೂರು ಮಹಾರಾಜ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಭೈರವಮೂರ್ತಿ ಅವರು 36 ವರ್ಷಗಳ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.

ಸಾವಿರಕ್ಕೂ ಹೆಚ್ಚು ಆಧುನಿಕ ವಚನಗಳನ್ನು ಹಾಗೂ ನಾನೂರಕ್ಕೂ ಹೆಚ್ಚು ಅಂಕಣ ಬರಹಗಳನ್ನು ಅವರು ಬರೆದಿದ್ದಾರೆ. ಮಂಡ್ಯ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಸುಮಾರು 70ಕ್ಕೂ ಹೆಚ್ಚು ಸಂಘ–ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ಕವಿತೆ, ಶಿಶು ಸಾಹಿತ್ಯ, ಚುಟುಕು ಸಾಹಿತ್ಯ, ಚಿಂತನ ಕೃತಿಗಳು, ಸಾಹಿತ್ಯ ವಿಮರ್ಶೆಗಳನ್ನು ಕುರಿತ ಅವರ ಕೃತಿಗಳು ಪ್ರಕಟವಾಗಿವೆ. ಹದಿನೈದಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ದೇಜಗೌ ಕುರಿತು 'ಕಾಯಕ ವಿಭೂತಿ' ಬೃಹತ್ ಅಭಿನಂದನ ಗ್ರಂಥವನ್ನು ಹೊರತಂದಿದ್ದಾರೆ. ದೊಡ್ಡ ರಂಗೇಗೌಡರನ್ನು ಕುರಿತು ಬರೆದಿರುವ 'ಮಧುಗಿರಿಯ ಮಾಣಿಕ್ಯ' ಸಂಭಾವನೆ ಗ್ರಂಥ ಇತ್ತೀಚೆಗೆ ಬಿಡುಗಡೆ ಆಗಿದೆ. ಶಿವಮಯ, ಅಕ್ಷಯ ಬೃಹತ್ ಅಭಿನಂದನ ಗ್ರಂಥಗಳು ಇವರನ್ನು ಕುರಿತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.