ಮೈಸೂರು: ‘ಆರ್‌ಎಸ್‌ಎಸ್ ಬಿತ್ತುವ ಸಿದ್ಧಾಂತದಿಂದ ಪ್ರಭಾವಕ್ಕೆ ಒಳಗಾದವರೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದದ್ದು’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ದೂರಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ನವರು ನಾವು ಒಳ್ಳೆಯವರೆಂದು ತೋರಿಸಿಕೊಳ್ಳುತ್ತಾರೆ. ಹಿಂದೂ ಸಂಸ್ಕೃತಿಯ ಉತ್ಕೃಷ್ಟ ಮೌಲ್ಯಗಳನ್ನು ತೋರಿಸುತ್ತೇವೆ ಎನ್ನುತ್ತಾರೆ. ಆದರೆ, ಮಾಡುವುದೆಲ್ಲವೂ ಅನಾಚಾರ; ಮನೆ ಮುಂದೆ ಬೃಂದಾವನ ಎನ್ನವಂತಾಗಿದೆ’ ಎಂದರು.
‘ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಸರಿಯಾಗಿದೆ. ಬೇರೆ ಸಂಸ್ಥೆಗಳಿಗೆ ಅನುಮತಿ ಪಡೆಯದೇ ಕಾರ್ಯಕ್ರಮಕ್ಕೆ ಅವಕಾಶ ಕೊಡುತ್ತಿದ್ದೀವಾ ನಾವು? ಉದ್ಯಾನಗಳಲ್ಲಿ ಪಥಸಂಚಲನಕ್ಕೆ ಅವಕಾಶ ಸಾಧ್ಯವೇ? ಇಡೀ ದೇಶಕ್ಕೆ ಒಂದು ಕಾನೂನು; ಆರ್‌ಎಸ್ಎಸ್‌ಗೆ ಒಂದು ಕಾನೂನು ಏಕೆ?’ ಎಂದು ಕೇಳಿದರು.
ನಿರ್ದಿಷ್ಟ ಸಿದ್ಧಾಂತ ಇಟ್ಟುಕೊಂಡು:
‘ಆರ್‌ಎಸ್‌ಎಸ್ ಕೇವಲ ಸಾಂಸ್ಕೃತಿಕ ಸಂಸ್ಥೆಯಲ್ಲ, ಅದೊಂದು ರಾಜಕೀಯ ಸಂಸ್ಥೆ. ನಿರ್ದಿಷ್ಟ ಸಿದ್ಧಾಂತ ಇಟ್ಟುಕೊಂಡು ಎಲ್ಲೆಡೆ ಹರಡಲು ಯತ್ನಿಸುತ್ತಿದೆ. ಶಾಲಾ– ಕಾಲೇಜುಗಳಲ್ಲಿ ಒಂದು ಕಾರ್ಯಸೂಚಿ ಇಟ್ಟುಕೊಂಡು ಕೆಲಸ ಮಾಡಲು ಅವಕಾಶ ಕೊಡಬಾರದು. ಆರ್‌ಎಸ್‌ಎಸ್ ಸಂವಿಧಾನಕ್ಕಿಂತಲೂ ಮೇಲೇನಲ್ಲ’ ಎಂದರು.
‘ನಾವು ಯಾರ ಹಕ್ಕುಗಳನ್ನೂ ಕಿತ್ತುಕೊಂಡಿಲ್ಲ. ನಿಯಮ ಪಾಲಿಸಿ ಕಾರ್ಯಕ್ರಮ ಮಾಡಲಿ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿರುವ ನಿಯಮಗಳನ್ನು ರಾಜ್ಯದಲ್ಲೂ ಜಾರಿಗೊಳಿಸುತ್ತೇವೆ’ ಎಂದು ಹೇಳಿದರು.
‘ನಿಷೇಧಗೊಂಡಿದ್ದ ಸಂಸ್ಥೆಯದು. ಆ ಬಗ್ಗೆ ಇತಿಹಾಸವೇ ಇದೆ. ನಾವೇನೂ ನಿಷೇಧಿಸಲು ಹೊರಟಿಲ್ಲ. ಸಾರ್ವಜನಕ ಸ್ಥಳ ಹಾಗೂ ಶಾಲಾ–ಕಾಲೇಜುಗಳಲ್ಲಿ ಅನುಮತಿ ಪಡೆಯದೆ ಪಥಸಂಚಲನಕ್ಕೆ ಅವಕಾಶ ಇಲ್ಲ ಎಂದಷ್ಟೇ ಹೇಳುತ್ತಿದ್ದೇವೆ’ ಎಂದರು.
‘ಅದು ನೋಂದಣಿಯಾಗಿಲ್ಲದ ಸಂಸ್ಥೆ. ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ನಮ್ಮ ಸರ್ಕಾರ ಯೋಚನೆ ಮಾಡುತ್ತಿರುವುದು ಸರಿಯಾಗಿದೆ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.