ADVERTISEMENT

ಇಳುವರಿ ಕುಸಿತ: ಕಂಗಾಲಾದ ಬೆಳೆಗಾರ

ತಂಬಾಕು ಕೊಯ್ಲು ಚುರುಕು: ಬೆಳೆಗಾರರನ್ನು ಚಿಂತೆಗೆ ದೂಡಿದ ನಿರ್ವಹಣೆ ವೆಚ್ಚದ ಹೆಚ್ಚಳ; ದರದತ್ತ ರೈತರ ಚಿತ್ತ

ಡಿ.ಬಿ, ನಾಗರಾಜ
Published 14 ಆಗಸ್ಟ್ 2021, 5:44 IST
Last Updated 14 ಆಗಸ್ಟ್ 2021, 5:44 IST
ಬೆಟ್ಟದಪುರದಲ್ಲಿ ತಂಬಾಕಿನ ಎಲೆಗಳ ಜೋಡಿಸುವಿಕೆ
ಬೆಟ್ಟದಪುರದಲ್ಲಿ ತಂಬಾಕಿನ ಎಲೆಗಳ ಜೋಡಿಸುವಿಕೆ   

ಮೈಸೂರು: ಪೂರ್ವ ಮುಂಗಾರಿನಲ್ಲೇ ನಾಟಿಯಾಗಿದ್ದ ತಂಬಾಕಿನ ಕೊಯ್ಲು ಇದೀಗ ನಡೆದಿದೆ. ಅದರ ಬೆನ್ನಿಗೆ ಬ್ಯಾರನ್‌ಗಳಲ್ಲಿ ಸೊಪ್ಪು ಒಣಗಿಸುವ ಪ್ರಕ್ರಿಯೆಯೂ ಚುರುಕುಗೊಂಡಿದೆ.

ಏಪ್ರಿಲ್‌ನಲ್ಲಿ ಮಳೆ ಕೊರತೆಯಿಂದ, ಮೇ ತಿಂಗಳಲ್ಲಿ ನಾಟಿಯಾಗಿದ್ದ ತಂಬಾಕು ಸಸಿಗಳು ಜುಲೈ, ಆಗಸ್ಟ್‌ನಲ್ಲಿ ಸುರಿದ ಮಳೆಗೆ ಹಸಿರಿನಿಂದ ನಳನಳಿಸುತ್ತಿವೆ. ಗಿಡಗಳು ಸಮೃದ್ಧವಾಗಿ ಬೆಳೆದಿದ್ದು, ಬೆಳೆಗಾರರಲ್ಲಿ ಭರವಸೆ ಹುಟ್ಟಿಸಿದೆ.

ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಸರಗೂರು, ಕೆ.ಆರ್‌.ನಗರ ತಾಲ್ಲೂಕಿನ 62,944 ಹೆಕ್ಟೇರ್‌ನಲ್ಲಿ ನಾಟಿಯಾಗಿದ್ದ ಹೊಗೆಸೊಪ್ಪಿನ ಕೊಯ್ಲು, ಸೆಪ್ಟೆಂಬರ್‌ ಮೊದಲ ವಾರದೊಳಗೆ ಪೂರ್ಣಗೊಳ್ಳಲಿದೆ.

ADVERTISEMENT

ಬ್ಯಾರನ್‌ನಲ್ಲಿ ತಂಬಾಕು ಗಿಡದ ಎಲೆಗಳನ್ನು ಹದಗೊಳಿಸುವ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ. ಸೆಪ್ಟೆಂಬರ್‌ನಲ್ಲೇ ಹರಾಜು ಕೇಂದ್ರಗಳು ಕಾರ್ಯಾರಂಭಿಸಲಿವೆ. ವರ್ಷಾಂತ್ಯದವರೆಗೂ ವಹಿವಾಟು ನಡೆಯಲಿದೆ.

ಇಳುವರಿಗೆ ಭಾರಿ ಹೊಡೆತ: ‘ಏಪ್ರಿಲ್‌, ಮೇ, ಜೂನ್‌ ತಿಂಗಳಲ್ಲಿ ಸತತವಾಗಿ ಮಳೆ ಕೊರತೆ ಕಾಡಿತು. ಬಾಡುತ್ತಿದ್ದ ತಂಬಾಕು ಗಿಡಗಳಿಗೆ ಜುಲೈನಲ್ಲಿ ಸುರಿದ ಮಳೆ ಸಂಜೀವಿನಿ ಆಯಿತು. ಆದರೂ ನಿರೀಕ್ಷಿತ ಇಳುವರಿ ಸಿಗುತ್ತಿಲ್ಲ. ಒಂದೊಂದು ಗಿಡಕ್ಕೆ ಉತ್ಕೃಷ್ಟ ಗುಣಮಟ್ಟದ 20ರಿಂದ 22 ಅಗಲವಾದ ಎಲೆ ಸಿಗುವ ಜಾಗದಲ್ಲಿ 12–14 ಎಲೆಗಳಷ್ಟೇ ಸಿಗುತ್ತಿವೆ’ ಎನ್ನುತ್ತಾರೆ ಬೆಟ್ಟದಪುರದ ತಂಬಾಕು ಬೆಳೆಗಾರ ಆರ್‌.ವೆಂಕಟೇಶ್‌.

‘ಸಕಾಲಕ್ಕೆ ಮಳೆ ಬೀಳದೆ ಹೊಗೆಸೊಪ್ಪಿನ ಗಿಡಗಳ ಬೆಳವಣಿಗೆ ಕುಂಠಿತಗೊಂಡಿತ್ತು. ಎಲೆಗಳು ದೊಡ್ಡದಾಗಿರಲಿಲ್ಲ. ಉತ್ಕೃಷ್ಟತೆಯೂ ಅಷ್ಟಕ್ಕಷ್ಟೇ ಎಂಬಂತಿತ್ತು. ಚೆಲ್ಲಿದ ಗೊಬ್ಬರ ಎಲೆಯ ಮೇಲೆ ಕೂತಿದ್ದರಿಂದ ಕಪ್ಪಾಗಿದ್ದವು. ಈ ವರ್ಷದ ಬೆಳೆ ಕೈಬಿಟ್ಟಂತೆ ಎಂದುಕೊಂಡಿದ್ದೆ. ಜುಲೈನಲ್ಲಿ ಸುರಿದ ವರ್ಷಧಾರೆಯಿಂದ ತಂಬಾಕು ಬೆಳೆಗಾರರಿಗೆ ಹೋದ ಜೀವ ಬಂದಂತಾಗಿದೆ’ ಎಂದು ಬಿ.ಮಟಕೆರೆಯ ತಂಬಾಕು ಬೆಳೆಗಾರ ನಂಜುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇ, ಜೂನ್‌ನಲ್ಲಿ ಮಳೆ ಸುರಿಯದಿದ್ದರಿಂದ ತಂಬಾಕು ಬೆಳೆಯೊಳಗೆ ಯಾವುದೇ ರೀತಿಯ ಕೃಷಿ ಚಟುವಟಿಕೆ ನಡೆಸಲಾಗಲಿಲ್ಲ. ಸಕಾಲಕ್ಕೆ ಕಳೆ ತೆಗೆಯೋದು, ಕುಂಟೆ ಹೊಡೆಯೋ ಕೆಲಸವೂ ನಡೆಯದಿದ್ದರಿಂದ, ಹೊಗೆಸೊಪ್ಪಿನ ಗಿಡಗಳಿದ್ದ ಭೂಮಿಯ ಮಣ್ಣು ಸಡಿಲಗೊಳ್ಳಲಿಲ್ಲ. ಇದರಿಂದ ಗಿಡದ ಬೇರಿಗೆ ಗಾಳಿ ಸರಾಗವಾಗಿ ತಲುಪಲಿಲ್ಲ. ಈ ಪ್ರಕ್ರಿಯೆ ನಡೆಯದಿದ್ದು ತಂಬಾಕಿನ ಇಳುವರಿ, ಗುಣಮಟ್ಟಕ್ಕೆ ಕೊಂಚ ಹೊಡೆತ ನೀಡಿದೆ’ ಎಂದು ಹುಣಸೂರು ಉಪ ವಿಭಾಗದ ಕೃಷಿ ಇಲಾಖೆಯ ಉಪ ನಿರ್ದೇಶಕ ಧನಂಜಯ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.