ADVERTISEMENT

ಯುವಜನೋತ್ಸವ: ಹೊಳೆದ ಪ್ರತಿಭೆಗಳು

ಜಿಲ್ಲಾಡಳಿತ ಆಯೋಜನೆ: ಶಾಸಕ ತನ್ವೀರ್ ಸೇಠ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:20 IST
Last Updated 26 ನವೆಂಬರ್ 2025, 4:20 IST

ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು. ಜಾನಪದ, ಶಾಸ್ತ್ರೀಯ ಸೇರಿದಂತೆ ನೃತ್ಯಕಲಾ ಸ್ಪರ್ಧೆಗಳಲ್ಲಿ ಪರಸ್ಪರ ಪೈಪೋಟಿ ನೀಡಿದರೆ, ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅರಿವಿನ ಬೆಳಕನ್ನು ಸರಳವಾಗಿ ತೋರಿಕೊಟ್ಟರು. 

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವಕೇಂದ್ರ, ಎನ್‌ಎಸ್‌ಎಸ್‌, ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ತರುಣರ ಕಲಾತಂಡಗಳು ಮನಮೋಹಕ ಪ್ರದರ್ಶನ ನೀಡಿದರು.

ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಕಂಸಾಳೆ ಪ್ರದರ್ಶಿಸಿದರೆ, ಅದೇ ಕಾಲೇಜಿನ ಮತ್ತೊಂದು ತಂಡ ಡೊಳ್ಳು ಕುಣಿತ ಕಾರ್ಯಕ್ರಮ ನೀಡಿತು. ವಿವಿಧ ವಿಭಾಗಗಳಲ್ಲಿ ಶಾಸ್ತ್ರೀಯ ನೃತ್ಯ, ವಾದ್ಯ, ಗಾಯನ, ಆಶುಭಾಷಣ, ಏಕಪಾತ್ರಾಭಿನಯ, ಜನಪದ ಗೀತೆ, ಜನಪದ ನೃತ್ಯ, ಚಿತ್ರಕಲೆ, ಕಾವ್ಯ ರಚನೆಯ ಸ್ಪರ್ಧೆಗಳು ನಡೆದವು.‌‌

ADVERTISEMENT

ಮಾದರಿ ಆಕರ್ಷಣೆ: ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಮಳೆ ನೀರು ಕೊಯ್ಲು, ಆಹಾರ ಕಲಬೆರಕೆ, ಡಿಎನ್‌ಎ ಮಾದರಿ, ರಕ್ತ ಪರಿಚಲನೆ, ಗಣಿತ ಪ್ರಮೇಯಗಳ ಮಾದರಿಯಲ್ಲಿ ಗಮನಸೆಳೆದರೆ, ಜೆಎಸ್‌ಎಸ್‌ ಕಾಲೇಜಿನ ವಿದ್ಯಾರ್ಥಿನಿಯರು ದ್ಯುತಿ ಸಂಶ್ಲೇಷಣಾ ಕ್ರಿಯೆ, ಬೆಳಕು ಚೆಲ್ಲುವ ಸಸ್ಯಗಳ ಮಾದರಿಯಿಂದ ನೋಡುಗರನ್ನು ಅಚ್ಚರಿಗೆ ದೂಡಿದರು. 

ತನ್ವೀರ್ ಉದ್ಘಾಟನೆ: ಉದ್ಘಾಟಿಸಿದ ಶಾಸಕ ತನ್ವೀರ್ ಸೇಠ್‌,  ‘ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಭೆ ಯಾರ ಸ್ವತ್ತಲ್ಲ. ಸೋಲು– ಗೆಲುವು ಸಾಮಾನ್ಯ. ಅವಕಾಶ ಬಳಸಿಕೊಂಡು ಪ್ರತಿಭೆ ತೋರಬೇಕು. ಪೋಷಕರು ಸೇರಿದಂತೆ ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು’ ಎಂದರು.

‘ತಾರಣ್ಯಾವಧಿಯು ಸಂಕೀರ್ಣವಾಗಿದ್ದು, ಎಲ್ಲ ಸವಾಲುಗಳನ್ನು ಮೀರಬೇಕು. ನಕರಾತ್ಮಕ ಮನೋಭಾವ ಬಿಟ್ಟು ಗುರಿಯ ಕಡೆಗೆ ಸಾಗಬೇಕು’ ಎಂದು ಸಲಹೆ ನೀಡಿದರು.

ಪ್ರಾದೇಶಿಕ ಆಯುಕ್ತ ನಿತೀಶ್‌ ಪಾಟೀಲ ಮಾತನಾಡಿದರು. ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಅಬ್ದುಲ್ ರಹಿಮಾನ್, ಸಹಾಯಕ ಪ್ರಾಧ್ಯಾಪಕ ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್‌ ನಾಯ್ಕ್‌, ತೀರ್ಪುಗಾರರಾದ ಪ್ರೊ.ಶಿವಲಿಂಗಯ್ಯ, ಶಿವಪ್ರಸಾದ್‌, ಅಲ್ಫೊನ್ ಡಿಸೋಜಾ ಪಾಲ್ಗೊಂಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.