ಮೈಸೂರು: ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿ, ಯುವ ಮನಸ್ಸುಗಳಿಗೆ ಮನರಂಜನೆಯ ರಸದೌತಣ ನೀಡಿದ ಯುವ ಸಂಭ್ರಮಕ್ಕೆ ಗುರುವಾರ ಅದ್ಧೂರಿ ತೆರೆ ಬಿದ್ದಿತು. ಕೊನೆಯ ದಿನವೂ ಬಯಲು ರಂಗಮಂದಿರ ಪ್ರೇಕ್ಷಕರಿಂದ ತುಂಬಿತ್ತು.
ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ ಕೃಷ್ಣ, ದಸರಾ ವೈಭವ, ಆರೋಗ್ಯ, ಜನಕೇಂದ್ರಿತ, ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಪೌರಾಣಿಕ, ಭಾರತೀಯ ಯೋಧರ ಪಾತ್ರ, ಕೊಡವ ನೃತ್ಯ, ಕರ್ನಾಟಕ ಜಾನಪದವನ್ನು ವರ್ಣಿಸುವ 58 ತಂಡಗಳ ನೃತ್ಯ ಪ್ರದರ್ಶನ ನಡೆಯಿತು. ಶ್ರೀರಂಗಪಟ್ಟಣದ ಡಿ ಪಾಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಅರ್ಜುನ ಆನೆ ಕುರಿತ ನೃತ್ಯ ರೂಪಕಕ್ಕೆ ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಿದರು.
ಬನುಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ ಚಲನಚಿತ್ರದ ಹಾಡುಗಳಿಗೆ ಹೆಜ್ಜೆಹಾಕಿದರು. ಗುಂಡ್ಲುಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಯೋಧ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ತ್ಯಾಗವನ್ನು ವರ್ಣಿಸಿದರು. ಎಚ್.ಡಿ.ಕೋಟೆಯ ಎಂಎಂಕೆ ಇಂಡಿಪೆಂಡೆಟ್ ಪಿಯು ಕಾಲೇಜು ವಿದ್ಯಾರ್ಥಿಗಳು ಕಾಳಿಕಾಂಬಾ ದೇವಿಯನ್ನು ಸ್ಮರಿಸಿದರು.
ವಿರಾಜಪೇಟೆಯ ಸೇಂಟ್ ಎನಿಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಓನಕೆ ಓಬವ್ವ ಕುರಿತು, ಕೃಷ್ಣಮೂರ್ತಿಪುರಂನ ಶಾರದ ನೆಲೆ ವಿದ್ಯಾರ್ಥಿನಿಲಯದ ಮಕ್ಕಳು ಜಮ್ಮು ಕಾಶ್ಮೀರದ ಪೆಹಲ್ಗಾಮ್ ಘಟನೆ ಕುರಿತು ಪ್ರದರ್ಶಿಸಿದ ನೃತ್ಯರೂಪಕಕ್ಕೆ ಪ್ರೇಕ್ಷಕರ ಚಪ್ಪಾಳೆಯ ಗೌರವ ದೊರೆಯಿತು.
ಜೆಎಸ್ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ‘ನಂದಾನಂದ ಮುಕುಂದ’, ‘ಕೈಯಲ್ಲಿ ಬಿಲ್ಲು ಹಿಡಿದೋನು ರಾಮ, ಗದೆಯನ್ನು ಹಿಡಿದಿರುವ ರಾಮ’, ‘ಗೋವಿಂದ ಗುರು ಹರಿ ಗೋಪಾಲ ರಾಧರಮಣ ಗೋಪಾಲ’ ಎಂದು ಕೃಷ್ಣನನ್ನು ಸ್ಮರಿಸಿದರು. ನೆಚ್ಚಿನ ಗೀತೆಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
ಕಿರುತರೆ ನಟ ರಾಜೇಶ್ ಧ್ರುವ ನಟಿಸಿದ ‘ಪೀಟರ್’ ಚಿತ್ರದ ಹಾಡನ್ನು ಪ್ರದರ್ಶಿಸಲಾಯಿತು, ಚಿತ್ರ ತಂಡಕ್ಕೆ ಶಾಸಕ ತನ್ವೀರ್ ಸೇಠ್ ಗೌರವ ಸಮರ್ಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.