ADVERTISEMENT

ನವ ಬೆಂಗಳೂರಿಗೆ ನೀಲನಕ್ಷೆ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ

ಸರ್ಕಾರ ವಿಶೇಷ ಅನುದಾನ; ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:54 IST
Last Updated 5 ಜನವರಿ 2022, 19:54 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿ.ಎಂ ಹಾಗೂ ಅದ್ವಿತೀಯ ಗ್ರೂಪ್‌ನ ಐಟಿ ಪಾರ್ಕ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಶಾಸಕ ಬಿ.ಎಸ್‌.ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್‌ ಮತ್ತು ಸಚಿವ ಬೈರತಿ ಬಸವರಾಜ ಇದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿ.ಎಂ ಹಾಗೂ ಅದ್ವಿತೀಯ ಗ್ರೂಪ್‌ನ ಐಟಿ ಪಾರ್ಕ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಶಾಸಕ ಬಿ.ಎಸ್‌.ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್‌ ಮತ್ತು ಸಚಿವ ಬೈರತಿ ಬಸವರಾಜ ಇದ್ದರು.   

ಬೆಂಗಳೂರು: ಸಕಲ ಸೌಲಭ್ಯಗಳಿರುವ ‘ನವ ಬೆಂಗಳೂರು’ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದ್ದು, ಇದಕ್ಕೆ ಸರ್ಕಾರ ವಿಶೇಷ ಅನುದಾನ ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಜಿ.ಎಂ ಹಾಗೂ ಅದ್ವಿತೀಯ ಗ್ರೂಪ್‌ನ ಐಟಿ ಪಾರ್ಕ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬೆಂಗಳೂರು ಬೃಹತ್ತಾಗಿ ಬೆಳೆಯುತ್ತಿದ್ದು ಯೋಜನಾಬದ್ಧವಾಗಿ ಮತ್ತು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕಿದೆ. ಎಲ್ಲ ವರ್ಗದ ಜನರಿಗೂ ಸೌಲಭ್ಯಗಳನ್ನು ತಲುಪಿಸುವ ವಿಶೇಷ ಯೋಜನೆಗಳನ್ನು ಒಟ್ಟಾಗಿ ರೂಪಿಸುತ್ತಿದ್ದೇವೆ. ಬಿ.ಎಸ್‌.ಯಡಿಯೂರಪ್ಪ ಅವರ ಕಾಲದಲ್ಲಿ ರೂಪಿಸಲಾದ ‘ಬೆಂಗಳೂರು ವಿಷನ್‌ 2022’ ಯೋಜನೆಯಡಿ 4 ರಿಂದ 5 ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅವುಗಳಿಗೆ ವೇಗವನ್ನು ನೀಡಲು ಈಗಾಗಲೇ ಹಲವಾರು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ADVERTISEMENT

‘ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಬೆಂಗಳೂರಿನಲ್ಲಿ ಐಟಿ ಹಬ್‌ ನಿರ್ಮಿಸಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಪ್ರಸಿದ್ಧವಾಗಿದ್ದೇ ಐಟಿಯಿಂದ. ನಾಲ್ಕೂ ದಿಕ್ಕಿನಲ್ಲಿ ಈ ಉದ್ಯಮ ವಿಸ್ತರಣೆಯಾಗಿದೆ. ಐಟಿ ಉದ್ಯಮಕ್ಕೆ ಹಿಂದಿನ ಸರ್ಕಾರಗಳೂ ಸೇರಿದಂತೆ ನಮ್ಮ ಸರ್ಕಾರವೂ ಪ್ರೋತ್ಸಾಹ ನೀಡುತ್ತಾ ಬಂದಿದೆ’ ಎಂದು ಅವರು ಹೇಳಿದರು.

ಜನರ ಕೈಯಲ್ಲಿ ಉದ್ಯೋಗ ಇದ್ದಾಗ ಮಾತ್ರ ದೇಶವೃದ್ಧಿಯಾಗಿ, ಅರ್ಥಿಕತೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಐ.ಟಿ ಸೇವೆಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅತಿ ಹೆಚ್ಚು ರಫ್ತು ಆಗುತ್ತಿರುವುದು ಐ.ಟಿ ವಲಯದಲ್ಲಿ. ದೇಶದ ಒಟ್ಟು ರಫ್ತಿನ ಪ್ರಮಾಣದಲ್ಲಿ ಶೇ 40 ರಷ್ಟು ರಫ್ತು ಬೆಂಗಳೂರಿನಿಂದ ಆಗುತ್ತಿದೆ. ಹೀಗಾಗಿ ಬೆಂಗಳೂರು ದೇಶದ ಆರ್ಥಿಕತೆ ಪ್ರಮುಖ ಕೇಂದ್ರವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಸಮಾರಂಭದಲ್ಲಿ ಸಚಿವರಾದಆರ್‌.ಅಶೋಕ, ಮುರುಗೇಶ್‌ ನಿರಾಣಿ, ಬೈರತಿ ಬಸವರಾಜ, ಶಾಸಕ ಬಿ.ಎಸ್‌.ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್‌.ಎ.ರವೀಂದ್ರನಾಥ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.