ADVERTISEMENT

ಸೌಲಭ್ಯವಂಚಿತ ವಿವೇಕಾನಂದ ಬಡಾವಣೆ ನಗರಸಭೆಗೆ

ಹಸ್ತಾಂತರದ ವಿರುದ್ಧ ಅನುಮಾನಗಳ ಹುತ್ತ, ಮೂಲ ಸೌಕರ್ಯಕ್ಕೆ ₹ 5 ಕೋಟಿ ಕೊಟ್ಟ ಕೆಎಚ್‌ಬಿ

ಎಂ.ಎನ್.ಯೋಗೇಶ್‌
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಗೊಳಿಸಿರುವ ವಿವೇಕಾನಂದ ಬಡಾವಣೆಯ ನೋಟ
ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಗೊಳಿಸಿರುವ ವಿವೇಕಾನಂದ ಬಡಾವಣೆಯ ನೋಟ   

ಮಂಡ್ಯ: ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಗೊಳಿಸಿರುವ ವಿವೇಕಾನಂದ ಬಡಾವಣೆ (ಕೆರೆಯಂಗಳ) ಸದ್ದಿಲ್ಲದೆ ನಗರಸಭೆಗೆ ಹಸ್ತಾಂತರಗೊಂಡಿದೆ. ಆದರೆ ಕನಿಷ್ಠ ಸೌಲಭ್ಯಗಳಿಲ್ಲದ ಬಡಾವಣೆಯನ್ನು ಏಕಾಏಕಿ ನಗರಸಭೆ ಸ್ವಾಧೀನಕ್ಕೆ ಪಡೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಯಾವುದೇ ಖಾಸಗಿ, ಸರ್ಕಾರಿ ಗೃಹ ನಿರ್ಮಾಣ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಬಡಾವಣೆಯನ್ನು ಸ್ಥಳೀಯ ಸಂಸ್ಥೆಗಳು ಸ್ವಾಧೀನಕ್ಕೆ ಪಡೆಯಬೇಕಾದರೆ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಾಗುತ್ತದೆ. ಬಡಾವಣೆಗಳಲ್ಲಿ ಸಕಲ ಮೂಲಸೌಲಭ್ಯ ಒದಗಿಸಲಾಗಿದೆ ಎಂಬುದು ಖಾತ್ರಿಯಾದ ನಂತರ ಸ್ವಾಧೀನಕ್ಕೆ ಪಡೆಯಲಾಗುತ್ತದೆ. ಅದಕ್ಕೂ ಮೊದಲು ಆಯಾ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆಯಬೇಕು.

ಆದರೆ ಮಂಡ್ಯ ನಗರಸಭೆಯಲ್ಲೀಗ ಆಡಳಿತ ಮಂಡಳಿ ರಚನೆಯಾಗಿಲ್ಲ. ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ಗೊಂದಲ ಹೈಕೋರ್ಟ್‌ನಲ್ಲಿರುವ ಕಾರಣ ಸಕಲ ಆಡಳಿತ ಅಧಿಕಾರಿವರ್ಗದ ಕೈಯಲ್ಲಿದೆ. ಇಂತಹ ಸಂದರ್ಭದಲ್ಲಿ ಮೂಲ ಸೌಲಭ್ಯಗಳಿಲ್ಲದ ವಿವೇಕಾನಂದ ಬಡಾವಣೆ ನಗರಸಭೆಗೆ ಹಸ್ತಾಂತರಗೊಂಡಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸೌಲಭ್ಯವಂಚಿತ ಬಡಾವಣೆಯನ್ನು ಸ್ವಾಧೀನ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಕೆಎಚ್‌ಬಿಯಿಂದ ₹ 5 ಕೋಟಿ: ಬಡಾವಣೆಗೆ ಮೂಲ ಸೌಲಭ್ಯ ಒದಗಿಸುವ ಕಾರಣಕ್ಕಾಗಿಯೇ ಗೃಹಮಂಡಳಿ ₹ 5 ಕೋಟಿ ಹಣವನ್ನು ನಗರಸಭೆಗೆ ಕೊಟ್ಟಿದೆ. ಸ್ಥಳೀಯ ನಗರಸಭೆ ಸದಸ್ಯರ ಗಮನಕ್ಕೂ ತಾರದೇ ಅಧಿಕಾರಿ ವರ್ಗ ಸ್ವಾಧೀನ ಪಡೆಯುವ ನಿರ್ಧಾರ ಕೈಗೊಂಡಿದೆ.

‘200 ಎಕರೆ ಭೂ ಪ್ರದೇಶ ಹೊಂದಿರುವ ಕಾಲೊನಿಯಲ್ಲಿ ನೂರಾರು ನಿವೇಶನ ಮಾರಾಟ ಮಾಡಲಾಗಿದೆ. ಅಲ್ಲಿ ಹಾವು, ಕ್ರಿಮಿ, ಕೀಟಗಳು ವಾಸ ಮಾಡುತ್ತಿದ್ದು ಜನರು ಜನರು ವಾಸ ಮಾಡಲು ಭಯಪಡುತ್ತಿದ್ದಾರೆ. ನಗರಸಭೆ ಪಡೆದಿರುವ ₹ 5 ಕೋಟಿ ಹಣ ಚರಂಡಿ ನಿರ್ಮಿಸಲೂ ಸಾಧ್ಯವಾಗುವುದಿಲ್ಲ. ಯಾವ ಮಾನದಂಡ ಅನುಸರಿಸಿ ಸ್ವಾಧೀನ ಪಡೆಯಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆಡಳಿತ ಮಂಡಳಿ ಅಸ್ಥಿತ್ವದಲ್ಲಿ ಇಲ್ಲದ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ’ ಎಂದ ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.

ವಿವೇಕಾನಂದ ಬಡಾವಣೆಯಲ್ಲಿ ಜೆಎಸ್‌ಎಸ್‌ ಶಾಲೆ ಸೇರಿ ಹಲವು ಸಂಘ, ಸಂಸ್ಥೆಗಳು, ರಾಜಕೀಯ ಮುಖಂಡರು, ಹೋರಾಟಗಾರರು, ಸಾಹಿತಿಗಳಿಗೆ ನಿವೇಶನ ಮಾರಾಟ ಮಾಡಲಾಗಿದೆ. ಕೆಲವೇ ಕೆಲವು ಮಂದಿ ಮನೆ ಕಟ್ಟಿದ್ದಾರೆ. ರಸ್ತೆ, ನೀರು, ಚರಂಡಿ, ಬೆಳಕಿನ ಸೌಲಭ್ಯವಿಲ್ಲದ ಕಾರಣ ಹಲವರು ಮನೆ ಕಟ್ಟಿಲ್ಲ.

ಬೀಡಿ ಕಾರ್ಮಿಕ ಕಾಲೊನಿಯ ಕರಾಳ ಮುಖ: ಅತೀಕ್‌ ಅಹಮ್ಮದ್‌ ಜಿಲ್ಲಾಧಿಕಾರಿಯಾಗಿದ್ದ ವೇಳೆ ಬೀಡಿ ಕಾರ್ಮಿಕ ಕಾಲೊನಿಯನ್ನು ನಗರಸಭೆ ಸ್ವಾಧೀನಕ್ಕೆ ಪಡೆಯಲಾಯಿತು. ಕಾರ್ಮಿಕ ನಿವಾಸಿಗಳ ಸಂಘ ಬಡಾವಣೆಯನ್ನು ಅಭಿವೃದ್ಧಿಗೊಳಿಸಿತ್ತು. ದಶಕದ ಹಿಂದೆ ನಗರಸಭೆ ಸ್ವಾಧೀನಕ್ಕೆ ಪಡೆದ ಬಡಾವಣೆ ಈಗಲೂ ಸೌಲಭ್ಯಗಳಿಲ್ಲದೆ ನರಳುತ್ತಿದೆ. ಮಳೆ ಸುರಿದರೆ ಅಲ್ಲಿಯ ಜನರ ಬದುಕು ಕೊಳಚೆ ನೀರಿನಲ್ಲಿ ಮುಳುಗುತ್ತದೆ. ಸಾಂಕ್ರಾಮಿಕ ರೋಗಗಳಿಂದ ಜನರು ಪರಿತಪಿಸುತ್ತಾರೆ.

ನಗರಸಭೆಗೆ ಬೀಡಿ ಕಾರ್ಮಿಕರ ಕಾಲೊನಿ ಹೊರೆಯಾಗಿದೆ. ಸೌಲಭ್ಯಕ್ಕಾಗಿ ನಗರಸಭೆ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ಜನರು ಈಗಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೀಡಿ ಕಾರ್ಮಿಕ ಕಾಲೊನಿಗೆ ಹೊಂದಿಕೊಂಡಂತಿರುವ ವಿವೇಕಾನಂದ ಬಡಾವಣೆಯನ್ನು ನಗರಸಭೆ ಸ್ವಾಧೀನಕ್ಕೆ ಪಡೆದಿರುವುದು ಸರಿಯಲ್ಲ ಎಂದು ಸದಸ್ಯರು ಆರೋಪಿಸುತ್ತಾರೆ.

‘ಬೀಡಿ ಕಾರ್ಮಿಕರ ಕಾಲೊನಿಯನ್ನು ಸ್ವಾಧೀನಕ್ಕೆ ಪಡೆದಾಗಲೂ ನಗರಸಭೆಯಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಈಗಲೂ ಅಂಥದೇ ಪರಿಸ್ಥಿತಿ ಇದೆ. ಇದನ್ನೇ ಅಧಿಕಾರಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ವಿವೇಕಾನಂದ ಬಡಾವಣೆಯನ್ನು ಅಭಿವೃದ್ಧಿಗೊಳಿಸುವಷ್ಟು ಹಣ ನಗರಸಭೆ ಬಳಿ ಇಲ್ಲ. ಈ ನಿರ್ಧಾರದಿಂದ ನಗರದ ಮೂಲ ಬಡಾವಣೆಗಳ ನಿವಾಸಿಗಳಿಗೆ ಸೌಲಭ್ಯ ನೀಡಲು ಸಾಧ್ಯವಾಗುವುದಿಲ್ಲ’ ಎಂದು ನಗರಸಭೆ ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.