ADVERTISEMENT

ಶಿಕ್ಷಣ ಇಲಾಖೆ ಪ್ರಕಟಣೆ ವಿರುದ್ಧ ಆಕ್ರೋಶ

ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 14:43 IST
Last Updated 25 ನವೆಂಬರ್ 2019, 14:43 IST
ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನಾಕಾರರು, ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು
ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನಾಕಾರರು, ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು   

ಮಡಿಕೇರಿ: ’ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂದು ಶಿಕ್ಷಣ ಇಲಾಖೆ ಹೊರಡಿಸಿದ ಪ್ರಕಟಣೆ ಖಂಡಿಸಿ, ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಸುದರ್ಶನ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಜನರಲ್ ತಿಮ್ಮಯ್ಯ ವೃತ್ತದ ತನಕ ಮೆರವಣಿಗೆಯಲ್ಲಿ ಸಾಗಿ ಮಾನವ ಸರಪಳಿ ರಚಿಸಿ ಸಂವಿಧಾನ ವಿರೋಧಿಗಳ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ಡಾ.ಅಂಬೇಡ್ಕರ್ ಅವರ ಆದರ್ಶ ಮತ್ತು ವಿಚಾರಧಾರೆಗಳನ್ನು ಮರೆ ಮಾಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ‘ಅಂಬೇಡ್ಕರ್‌ ಅವರು ಎಲ್ಲ ಜಾತಿ, ಧರ್ಮಕ್ಕೂ ಸಮಾನತೆಯನ್ನು ಸಾರುವ ಸಂವಿಧಾನವನ್ನು ರಚಿಸಿದ್ದಾರೆ. ಈ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಎತ್ತಿ ಹಿಡಿದಿದೆ. ಇಂತಹ ಪ್ರಜಾಪ್ರಭುತ್ವ ಹೊಂದಿದ ಸಂವಿಧಾನದ ಮೇಲೆ ಹಲವು ಕಿಡಿಗೇಡಿ ಮನುವಾದಿಗಳು, ಸಂವಿಧಾನ ಸರಿಯಿಲ್ಲ. ಸಂವಿಧಾನವನ್ನು ಬದಲಾವಣೆ ಮಾಡಬೇಕು ಎನ್ನುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಅವರು ಒಬ್ಬರೇ ಬರೆದಿಲ್ಲವೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಣತಿಯಂತೆ ಎನ್‌ಜಿಒ ಸಂಸ್ಥೆಯೊಂದನ್ನು ಬಿಟ್ಟು ವರದಿ ಮಾಡಲಾಗಿದೆ. ಈ ಬಗ್ಗೆ ರಾಜ್ಯದಾದ್ಯಂತ ಹೋರಾಟಗಳು ನಡೆದ ಹಿನ್ನೆಲೆ ಎನ್‌ಜಿಒ ಸಂಸ್ಥೆಯ ಕೆಲವರನ್ನು ಅಮಾನತುಗೊಳಿಸಲಾಗಿದೆ. ಆದರೆ, ಅಮಾತುಗೊಳಿಸಬೇಕಾಗಿರುವುದು ಎನ್‌ಜಿಒ ಸಂಸ್ಥೆಯವರನ್ನಲ್ಲ. ಶಿಕ್ಷಣ ಇಲಾಖೆಯ ಮಂತ್ರಿಗಳು ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

‘ಸಂವಿಧಾನವನ್ನು ಕಿತ್ತು ಹಾಕುವ ಮನಸ್ಥಿತಿ ಇರುವವರೇ ಅಧಿಕಾರದಲ್ಲಿದ್ದಾರೆ. ಹಲವು ಬಾರಿ ಸಂವಿಧಾನ ಕರಡನ್ನು ಸುಡುವ ಮೂಲಕ ಅದನ್ನು ತೆಗೆಯುವುದಕ್ಕೆ ಬಂದಿದ್ದೇವೆ ಎನ್ನುವ ಸಂದೇಶವನ್ನು ನೀಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಬಹುಜನ ಸಮಾಜ ಪಕ್ಷದ ಮುಖಂಡ ಮೋಹನ್ ಮೌರ್ಯ ಮಾತನಾಡಿ, ‘ಸಂವಿಧಾನವನ್ನು ಬರೆದಿರುವುದು ಡಾ.ಬಿ.ಆರ್.ಅಂಬೇಡ್ಕರ್ ಎಂಬುವುದು ಪ್ರಪಂಚದ ಎಲ್ಲ ಜನರಿಗೂ ತಿಳಿದಿದೆ. ಆದರೆ, ಶಿಕ್ಷಣ ಇಲಾಖೆ ಒಂದು ಸಣ್ಣ ಮಾಹಿತಿಯನ್ನೂ ಪಡೆಯದೇ ಸಂವಿಧಾನ ಒಬ್ಬರೇ ಸಂವಿಧಾನವನ್ನು ರಚನೆ ಮಾಡಿಲ್ಲ ಎನ್ನುವ ವಿಷ ಬೀಜವನ್ನು ಮಕ್ಕಳಲ್ಲಿ ಬಿತ್ತಲು ಹೊರಟಿದೆ’ ಎಂದು ದೂರಿದರು.

ಅಂಬೇಡ್ಕರ್ ಎರಡು ವರ್ಷ 11 ತಿಂಗಳು 18 ದಿನದ ಸಮಯದಲ್ಲಿ ಸಂವಿಧಾನ ರಚಿಸಿದ್ದಾರೆ. ಇವರ ಪ್ರಯತ್ನದ ಫಲವಾಗಿಯೇ ಉತ್ತಮ ಪ್ರಜಾಪ್ರಬುತ್ವ ರಾಷ್ಟ್ರ ನಿರ್ಮಾಣವಾಗಿದೆ ಎಂದು ಹೇಳಿದರು.

ಎಲ್ಲ ರೀತಿಯ ರೀತಿಯ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದ್ದು, ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಉಳಿಸಿ, ಮನುವಾದ ಅಳಿಸಿ, ದೇಶವನ್ನು ರಕ್ಷಣೆ ಮಾಡಿ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಂ.ನಂದಕುಮಾರ್, ದಲಿತಪರ ಸಂಘಟನೆಗಳ ಮುಖಂಡರಾದ ಜೋಯಪ್ಪ ಹಾನಗಲ್, ಎಚ್.ಎಲ್.ದಿವಾಕರ್, ಎಚ್.ವಿ. ಜಯಮ್ಮ, ದೀಪಕ್, ಕೃಷ್ಣಪ್ಪ, ಸೋಮಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.