ADVERTISEMENT

ಅಕ್ರಮ ಮರಳು ನಿಯಂತ್ರಣ: ತಂಡ ರಚನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:08 IST
Last Updated 6 ಸೆಪ್ಟೆಂಬರ್ 2013, 6:08 IST

ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳು ನಿಯಂತ್ರಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕಂದಾಯ, ಲೋಕೋಪಯೋಗಿ, ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಿ, ಅಕ್ರಮ ಮರಳು ಸಾಗಾಣೆಕೆ ನಿಯಂತ್ರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಂಡಿದೆ. ಜಿಲ್ಲಾಡಳಿಯ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡರೂ ನಿಯಂತ್ರಣವಾಗುತ್ತಿಲ್ಲ. ಈ ಹಿನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.

ಮರಳು ಸಾಗಾಣಿಕೆ ಪರವಾನಗಿ ಪಡೆದ ಗುತ್ತಿಗೆದಾರರ ಸ್ಟಾಕ್ ಯಾರ್ಡ್ ಬಳಿ ಸಿಸಿ ಕ್ಯಾಮೆರಾ ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮರಳು ದಾಸ್ತಾನು ಸಂಗ್ರಹ ಕುರಿತು ಪ್ರತಿನಿಧಿ ಮಾಹಿತಿ ದಾಖಲೆ ಪುಸ್ತಕದಲ್ಲಿ ನಮೂದಿಸಬೇಕು ಎಂದು ತಿಳಿಸಿದರು.

ಚೆಕ್ ಪೋಸ್ಟ್‌ಗಳಲ್ಲಿರುವ ಹೋಮ್‌ಗಾರ್ಡ್ ಸಿಬ್ಬಂದಿ ನಿಯೋಜನೆ ರದ್ದುಗೊಳಿಸಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರೊಂದಿಗೆ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕಾಗಿ 20 ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ.

ದೇವದುರ್ಗ ತಾಲ್ಲೂಕಿನಲ್ಲಿ 10 ಚೆಕ್‌ಪೋಸ್ಟ್‌ಗಳಿವೆ. ಎಲ್ಲ ಮಾರ್ಗಗಳು ಸೇರುವ ಭಾಗಗಳಲ್ಲಿ ನೂತನ ಚೆಕ್ ಪೋಸ್ಟ್ ಆರಂಭಿಸಬೇಕು ಎಂದು ತಿಳಿಸಿದರು.

ನವೋದಯ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ಹತ್ತಿರ, ಶಕ್ತಿನಗರದ ಮುಖ್ಯರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಅಕ್ರಮ ಮರಳು ಸಾಗಾಣಿಕೆ ವಾಹನಗಳ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಗಳು ಲೋಕೋಪಯೋಗಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವಿಭಾಗಾಧಿಕಾರಿ ಎನ್.ಮಂಜುಶ್ರೀ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗ, ಸಾರಿಗೆ ಇಲಾಖೆಯ ಅಧಿಕಾರಿ ಸಿದ್ದಲಿಂಗೇಶ್ವರ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರಪ್ಪ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.