ADVERTISEMENT

ಅದೃಷ್ಟ ಮನೆ ಬಾಗಿಲಿಗೇ ಹುಡುಕಿ ಬಂತು!

ಪ್ರಕಾಶ ಮಸ್ಕಿ
Published 23 ಮಾರ್ಚ್ 2018, 12:23 IST
Last Updated 23 ಮಾರ್ಚ್ 2018, 12:23 IST
ಮೊದಲ ಶಾಸಕರಾಗಿ ತೆರೆದ ನೂತನ ಕಚೇರಿಯಲ್ಲಿ ಪ್ರತಾಪ್‌ಗೌಡ ಪಾಟೀಲ
ಮೊದಲ ಶಾಸಕರಾಗಿ ತೆರೆದ ನೂತನ ಕಚೇರಿಯಲ್ಲಿ ಪ್ರತಾಪ್‌ಗೌಡ ಪಾಟೀಲ   

ಮಸ್ಕಿ: ‘ನಾನು ಶಾಸಕನಾಗಬೇಕು ಎಂದು ಕನಸು ಸಹ ಕಂಡಿರಲಿಲ್ಲ. 2008ರಲ್ಲಿ ಹೊಸದಾಗಿ ರಚನೆಯಾದ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅದೃಷ್ಟ ಮನೆ ಬಾಗಿಲಿಗೆ ಹುಡುಕಿಕೊಂಡು ಬಂತು’ ಎಂದು ಶಾಸಕ ಪ್ರತಾಪಗೌಡ ಪಾಟೀಲ ಅವರು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ದಿನಗಳನ್ನು ನೆನಪಿಸಿಕೊಂಡರು.

‘2008 ರಲ್ಲಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿ ಮಸ್ಕಿ ರಚನೆಗೊಂಡಿತ್ತು. ವಿಧಾನ ಪರಿಷತ್‌ ಸದಸ್ಯರಾಗಿದ್ದ ಮನೋಹರ ಮಸ್ಕಿ ನನ್ನ ಸ್ನೇಹಿತ. ಬಿಜೆಪಿ ವರಿಷ್ಠರು ಹಾಗೂ ಮನೋಹರ ಮಸ್ಕಿ ಅವರು ಮನೆಗೆ ಬಂದವರು ನೀನೆ ಸೂಕ್ತ ಅಭ್ಯರ್ಥಿ, ನಿನ್ನ ಬಿಟ್ಟರೆ ಇಲ್ಲಿ ಅಂತಹ ಅಭ್ಯರ್ಥಿ ಇಲ್ಲಾ ಎಂದು ಹೇಳಿ ಬಿಜೆಪಿ ಟಿಕೆಟ್ ನೀಡಿ ಶಾಸಕನಾಗುವುದಕ್ಕೆ ಮೂಲ ಕಾರಣರಾದರು’ ಎಂದು ಸ್ಮರಿಸಿದರು.

‘ಹೊಸ ಕ್ಷೇತ್ರಕ್ಕೆ ಮೊದಲ ಶಾಸಕನಾಗಿ ಪ್ರಥಮ ಬಾರಿಗೆ ವಿಧಾನಸಭೆಯ ಮೆಟ್ಟಲು ಹತ್ತುವಾಗಿ ನನ್ನ ಮೈ ಒಂದು ಕ್ಷಣ ರೋಮಾಂಚನವಾಯಿತು. ನಾನು ಶಾಸಕನಾಗಿ ಇಲ್ಲಿಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ವಿಧಾನಸಭೆಯ ಪ್ರಥಮ ಅಧಿವೇಶನದ ಪಾಲ್ಗೊಂಡಾಗ ನನಗೆ ಅಲ್ಲಿ ನಡೆಯುತ್ತಿದ್ದ ಕಾರ್ಯಕಲಾಪಗಳು, ಚರ್ಚೆಗಳ ಬಗ್ಗೆ ಕುತೂಹಲ ಇತ್ತು’ ಎಂದರು.

ADVERTISEMENT

‘ಮೊದಲ ಬಾರಿ ಶಾಸಕನಾದ ಅವಧಿಯಿಂದ ಆರಂಭಿಸಿ ಒಂದು ದಿನವೂ ಅಧಿವೇಶನದಲ್ಲಿ ತಪ್ಪದೆ ಪಾಲ್ಗೊಂಡಿದ್ದೇನೆ. ಕ್ಷೇತ್ರದ ಪ್ರಮುಖ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಧಿವೇಶನದಲ್ಲಿ ಕೆಲವೊಂದು ಸಾರಿ ನನಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಕ್ಷೇತ್ರದ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

‘ಪ್ರಥಮ ಬಾರಿಗೆ ಶಾಸಕನಾದಾಗ ನನಗೆ ದೊಡ್ಡ ಸವಾಲಾಗಿದ್ದು, ಸಿಂಧನೂರು–ಮಸ್ಕಿ ಹಾಗೂ ಸಿಂಧನೂರು–ಲಿಂಗಸುಗೂರು ಹೆದ್ದಾರಿ ನಿರ್ಮಾಣ. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ನನಗೆ ಹಿಡಿಶಾಪ ಹಾಕುತ್ತಿದ್ದರು. ಮೊದಲ ಅವಧಿಗೆ ರಸ್ತೆ ಮಾಡಿಸಲು ನನಗೆ ಸಾಧ್ಯವಾಗಲಿಲ್ಲ’ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು.

‘ಗ್ರಾಮ ಪಂಚಾಯಿತಿ ಸದಸ್ಯನಾಗಿ ಅವಿರೋಧ ಆಯ್ಕೆಯಾಗಿದ್ದೆ. ಶಾಸಕರಾಗಿದ್ದ ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಮಾನ್ವಿ ಶಾಸಕ ಗಂಗಾಧರ ನಾಯಕ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಆಗಾಗ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳ  ಪರಿಚಯವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.