ADVERTISEMENT

ಅಭಿವೃದ್ಧಿ ಕೆಲಸಗಳಿಗೆ ಬೋಸರಾಜು ಮಾದರಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:50 IST
Last Updated 14 ಜುಲೈ 2012, 5:50 IST

ಕವಿತಾಳ: ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಚುನಾವಣಾ ಸಮಯದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತೋರಣದಿನ್ನಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ನಾಯಕ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಹಲವು ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ಮಾಡಿ ಅವರು ಮಾತನಾಡಿದರು. ರಸ್ತೆ, ಕುಡಿಯುವ ನೀರು, ಶಾಲಾ ಕಾಂಪೌಂಡ್ ಗೋಡೆ ಮತ್ತು ಅಂಗನವಾಡಿ ಕಟ್ಟಡಗಳು ಸೇರಿದಂತೆ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಶಾಸಕ ಎನ್.ಎಸ್.ಬೋಸರಾಜು ಅವರ ಮಾರ್ಗದರ್ಶನದಲ್ಲಿ ಜಾರಿ ಮಾಡಿದ್ದಾಗಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ನಿರ್ಮಿಸಲಾಗಿದ್ದ  ಮೇಲ್ತೊಟ್ಟಿಗಳಿಗೆ ನೀರು ಕಲ್ಪಿಸಿ ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ನೀಡಿದ್ದಾಗಿ ಹೇಳಿದರು. ಮಸ್ಕಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದು ಹಿರಿಯ ಮುಖಂಡರ ಮಾರ್ಗದರ್ಶನದಂತೆ ಪಕ್ಷಕ್ಕಾಗಿ ದುಡಿಯುವುದಾಗಿ ತಿಳಿಸಿದರು.

2010-11ನೇ ಸಾಲಿನ ಬಿಆರ್‌ಜಿಎಫ್ ಅನುದಾನದಲ್ಲಿ ಅಮೀನಗಡ, ಕಾಚಾಪುರ, ಗೂಗೆಬಾಳ, ಹಾಲಾಪುರ ಮತ್ತು ಹಿರೇಕಡಬೂರು ಗ್ರಾಮಗಳಲ್ಲಿ ಕ್ರಮವಾಗಿ ಅಂದಾಜು ರೂ.4.10 ಲಕ್ಷ ಮೊತ್ತದ ಪ್ರೌಢಶಾಲೆಯ ಕಾಂಪೌಂಡ್ ಗೋಡೆ, ರೂ.5 ಲಕ್ಷದಲ್ಲಿ ಕಾಚಾಪುರ ಗ್ರಾಮದ ಕೆರೆ ಹೂಳೆತ್ತುವುದು, ಕಾಚಾಪುರ ಮತ್ತು ಗೂಗೆಬಾಳ ಗ್ರಾಮಗಳಲ್ಲಿ ರೂ.3.5 ಲಕ್ಷದ ಅಂಗನವಾಡಿ ಕಟ್ಟಡಗಳು, ರೂ.2.6 ಲಕ್ಷ ಮೊತ್ತದಲ್ಲಿ ಹಾಲಾಪುರ ಪ್ರೌಢಶಾಲೆಗೆ ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ಹಿರೇಕಡಬೂರು ಗ್ರಾಮದಲ್ಲಿ ರೂ.3.75 ಲಕ್ಷ ಮೊತ್ತದ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಅವರು ಭೂಮಿಪೂಜೆ ಮಾಡಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಲಿಂಗಪ್ಪ ವಟಗಲ್, ವೆಂಕಟೇಶ, ಅಮೀನಗಡ ಪಂಚಾಯಿತಿ ಅಧ್ಯಕ್ಷ ಮೌನೇಶ ದೊಡ್ಮನಿ, ಮೃತ್ಯುಂಜಯಸ್ವಾಮಿ ಗೂಗೆಬಾಳ, ಶರಬಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕರಿಯಪ್ಪ ಹಾಲಾಪುರ, ಶ್ರೀನಿವಾಸ ಅಮೀನಗಡ ಮತ್ತು ನಿರ್ಮಿತಿ ಕೇಂದ್ರದ ಎಂಜಿನಿಯರ್ ಕಾಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.