ADVERTISEMENT

ಅಭಿವೃದ್ಧಿ ವಂಚಿತ ಹಟ್ಟಿಹೊಸೂರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 9:05 IST
Last Updated 5 ಆಗಸ್ಟ್ 2011, 9:05 IST
ಅಭಿವೃದ್ಧಿ ವಂಚಿತ ಹಟ್ಟಿಹೊಸೂರು
ಅಭಿವೃದ್ಧಿ ವಂಚಿತ ಹಟ್ಟಿಹೊಸೂರು   

ಹಟ್ಟಿ ಚಿನ್ನದ ಗಣಿ: ದೀಪದ ಕೆಳಗೆ ಕತ್ತಲು ಎಂಬಂತೆ  ಹಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯೊಳಗೆ ಬರುವ ಹಟ್ಟಿ ಹೊಸೂರು ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. 

  ಈ ಗ್ರಾಮವು ಗ್ರಾಮ ಪಂಚಾಯಿತಿಯನ್ನು 9ನೇ ವಾರ್ಡ್ ಎಂದು ಪರಿಗಣಿಸಲಾಗಿದೆ.  ಆದರೆ ಗ್ರಾಮ ಪಂಚಾಯಿತಿಯ ಉಳಿದ   ವಾರ್ಡ್‌ಗಳಿಗೆ ಹೋಲಿಸಿದರೆ ಅಭಿವೃದ್ಧಿಗೊಂಡಿಲ್ಲ.  ಈ ಗ್ರಾಮವು 95 ಮನೆಗಳನ್ನು  ಹೊಂದಿದೆ. 300 ಜನಸಂಖ್ಯೆ ಹೊಂದಿದೆ.

ಇಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಬೇರೆ ವಾರ್ಡ್‌ಗಳಿಗೆ ಹಟ್ಟಿ ಗಣಿಯಿಂದ ಕೃಷ್ಣ ನದಿ ನೀರು ಮನೆಗಳಿಗೆ ಪೂರೈಕೆ ಮಾಡುತ್ತಿದೆ. `ನಾವು ಗ್ರಾಮದಿಂದ 1 ಕಿ.ಮೀ. ದೂರವಿರುವ ಕೈಪಂಪ್ ಅಳವಡಿಸಿದ ಕೊಳವೆ ಬಾವಿಯಿಂದ ಕುಡಿಯಲು ನೀರು ತರಬೇಕು. ಇಡೀ ಊರಿಗೆ  ಕುಡಿಯುವ ನೀರು ಒದಗಿಸುವ ಕೊಳವೆಬಾವಿ ಇದೊಂದೇ ಇದೆ. ಕಿರು ನೀರು ಸರಬರಾಜು ಯೋಜನೆಯಡಿಯಲ್ಲಿ ಗ್ರಾಮಕ್ಕೆ ನೀರು ಪೂರೈಸುವ ಕಾಮಗಾರಿ ಕಳೆದ ಆರು ತಿಂಗಳುಗಳಿಂದ ಸ್ಥಗಿತಗೊಂಡಿದೆ~ ಎಂದು ಗ್ರಾಮದ ಚಂದ್ರಮ್ಮ ಹೇಳುತ್ತಾರೆ.

2010-11ನೇ ಸಾಲಿನ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಏಕೈಕ ಚರಂಡಿ ನಿರ್ಮಿಸಲಾಗಿದೆ. ತರಾತುರಿಯಲ್ಲಿ ಇದನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಚರಂಡಿ ಇದ್ದೂ ಇಲ್ಲದಂತಾಗಿದೆ. ಬಚ್ಚಲು ನೀರು ರಸ್ತೆ ಮೇಲೆ ಹರಿಯುವುದು ತಪ್ಪಿಲ್ಲ.

ಗ್ರಾಮಕ್ಕೆ ಹಟ್ಟಿ ಲೈನ್‌ನಿಂದ ವಿದ್ಯುತ್ ಸಂಪರ್ಕ ನೀಡುವಂತೆ ಹಲವಾರು ಸಲ ಜೆಸ್ಕಾಂ ಹಿರಿಯ ಎಂಜಿನಿಯರ್‌ಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮೀಪ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಹಟ್ಟಿ ಲೈನ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
 
ಅಲ್ಲಿಂದ ಅನತಿದೂರದಲ್ಲಿ ನಮ್ಮ ಗ್ರಾಮವಿದೆ. 10 ಕಂಬಗಳು ಹಾಕಿದರೆ ಹಟ್ಟಿ ಲೈನ್‌ನಿಂದ ವಿದ್ಯುತ್ ಕೊಡಬಹುದು. ಆದರೆ ಜೆಸ್ಕಾಂ ಎಂಜಿನಿಯರ್‌ಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ದಿನಕ್ಕೆ 6 ರಿಂದ 8 ತಾಸು ವಿದ್ಯುತ್ ಇಲ್ಲದೇ ಪರದಾಡಬೇಕಾಗಿದೆ.

ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೇ ಮುಖ್ಯ ರಸ್ತೆಯೇ ಶೌಚಾಲಯವಾಗಿದೆ. ಆ ರಸ್ತೆಯಿಂದ ಯಾರೂ ತಿರುಗಾಡುವಂತಿಲ್ಲ.

ಇಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದೆ. 42 ಮಕ್ಕಳಿಗೆ 3 ಜನ ಶಿಕ್ಷಕರಿದ್ದಾರೆ. ನಾಲ್ಕು ಕೊಠಡಿಗಳಿವೆ. ಶಿಕ್ಷಣ ಇಲಾಖೆ ಅನಗತ್ಯವಾಗಿ ನಿರ್ಮಿಸುತ್ತಿರುವ ಕೊಠಡಿ ಕಳಪೆ ಕಾಮಗಾರಿ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇದೆ. ಅಂಗನವಾಡಿ ಕಾರ್ಯಕರ್ತೆ ಬರುವುದಿಲ್ಲ. ವಾರದಲ್ಲಿ ಒಂದೆರಡು ದಿನಗಳು ಮಾತ್ರ ಬರುತ್ತಾರೆ. ಕೇಂದ್ರದಲ್ಲಿ ದಿನಾಲು 5 ರಿಂದ 6 ಜನ ಮಕ್ಕಳು ಇರುತ್ತಾರೆ. ಹಾಜರಿ ಪುಸ್ತಕದಲ್ಲಿ 20 ಜನ ಮಕ್ಕಳ ಹೆಸರು ದಾಖಲಿವೆ. ಅಂಗನವಾಡಿ ಸಹಾಯಕಿಯೇ ಎಲ್ಲಾ ನೋಡಿಕೊಳ್ಳಬೇಕು.

ಗ್ರಾಮ ಪಂಚಾಯಿತಿ ಸದಸ್ಯರು ಇದ್ದೂ ಪ್ರಯೋಜನವಿಲ್ಲ. ಶಾಸಕರು ಬರೀ ಓಟು ಕೇಳಲು ಊರಿಗೆ ಬರುತ್ತಾರೆ. ಚುನಾವಣೆ ನಂತರ ತಿರುಗಿ ನೋಡುವುದಿಲ್ಲ ಎಂದು ದೇವಮ್ಮ ದೂರುತ್ತಾರೆ. ನಮ್ಮ ಊರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತವು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂಬುದು ಗ್ರಾಮಸ್ಥರು ಆಪಾದಿಸುತ್ತಾರೆ.

ಕುಡಿಯುವ ನೀರು ಪೂರೈಸಬೇಕು. ಹಟ್ಟಿ ಲೈನ್‌ನಿಂದ ವಿದ್ಯುತ್ ಸಂಪರ್ಕಕೊಡಬೇಕು. ಚರಂಡಿ ಮತ್ತು ರಸ್ತೆ ನಿರ್ಮಿಸಬೇಕು. ಅಂಗನವಾಡಿ ಸರಿಯಾಗಿ ನಡೆಯುವಂತಾಗಬೇಕು. ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.