ADVERTISEMENT

ಅಮಾಯಕರ ಮೇಲೆ ಹಲ್ಲೆ ನಡೆಸಿದರೆ ಕ್ರಮ

ಡಿವೈಎಸ್ಪಿ ಶರಣಬಸಪ್ಪ ಸುಬೇದಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:03 IST
Last Updated 20 ಮೇ 2018, 13:03 IST
ಲಿಂಗಸುಗೂರಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಮಹಾರಾಷ್ಟ್ರ ಮೂಲದ ಕೂಲಿಕಾರ ಕುಟುಂಬಗಳ ಸದಸ್ಯರ ಜತೆ ಪೊಲೀಸ್‌ ಅಧಿಕಾರಿ
ಲಿಂಗಸುಗೂರಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಮಹಾರಾಷ್ಟ್ರ ಮೂಲದ ಕೂಲಿಕಾರ ಕುಟುಂಬಗಳ ಸದಸ್ಯರ ಜತೆ ಪೊಲೀಸ್‌ ಅಧಿಕಾರಿ   

ಲಿಂಗಸುಗೂರು: ‘ಮಕ್ಕಳು ಕಳ್ಳರು ಬಂದಿದ್ದಾರೆ ಎಂಬ ವದಂತಿ ಆಧರಿಸಿ ಬಹುತೇಕ ಕಡೆಗಳಲ್ಲಿ ಅಮಾಯಕರ ಮೇಲೆ ದೌರ್ಜನ್ಯ, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಪ್ರಕರಣ ಮರುಕಳಿಸಿದರೆ ಹಲ್ಲೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್ಪಿ ಶರಣಬಸಪ್ಪ ಸುಬೇದಾರ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಕರಡಕಲ್ಲ, ಕಸಬಾಲಿಂಗಸುಗೂರು, ಹೊನ್ನಳ್ಳಿ, ಗುಂತಗೋಳ ಸೇರಿದಂತೆ ಕೆಲವೆಡೆ ಅಮಾಯಕ ಸಾಧುಗಳು, ಕೂಲಿಕಾರರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಮೊಬೈಲ್‌ ಮೂಲಕ ಕಪೋಲಕಲ್ಪಿತ ಚಿತ್ರಗಳು, ಸಂದೇಶಗಳು ಹರಿದಾಡುತ್ತಿರುವುದರಿಂದ ಜನತೆ ಭಯ ಭೀತಿಗೊಂಡಿದ್ದಾರೆ. ಈ ರೀತಿ ಜಾಲತಾಣದಲ್ಲಿ ಅನಗತ್ಯ ವಿಷಯಗಳನ್ನು ಹಾಕುವವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಮಹಾರಾಷ್ಟ್ರ ಮೂಲದ ಕುಟುಂಬಗಳು ಕಾಳಾಪುರ ಬಳಿ ಇದ್ದಲಿ ಸುಡುವ ಕೆಲಸಕ್ಕೆ ಬಂದಿದ್ದಾರೆ. ಆ ಕುಟುಂಬ ಪೈಕಿ ಕೆಲವರು ಪಟ್ಟಣಕ್ಕೆ ಬಂದಾಗ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪಿಎಸ್‌ಐ ದಾದಾವಲಿ ಅವರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಮಾಹಿತಿ ಸಂಗ್ರಹಿಸಿದಾಗ ಕೂಲಿ ಕೆಲಸಕ್ಕೆ ಬಂದವರೆಂಬುದು ದೃಢಪಟ್ಟಿದೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಹತ್ತಿರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಸಿಪಿಐ ವಿನೋದ ಮುಕ್ತೆದಾರ, ಪಿಎಸ್‌ಐ ದಾದಾವಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.