ADVERTISEMENT

ಉಪವಾಸ ಸತ್ಯಾಗ್ರಹ: ಗರ್ಭಿಣಿ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 10:25 IST
Last Updated 6 ಜುಲೈ 2012, 10:25 IST

ಲಿಂಗಸುಗೂರ: ಕಳೆದ ಒಂದು ವರ್ಷದಿಂದ ತಾಲ್ಲೂಕಿನ ಗುರುಗುಂಟಾದ ಜನತಾ ಕಾಲೊನಿಯಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸುವಂತೆ ಅವಿರತ ಹೋರಾಟ ನಡೆಸುತ್ತ ಬರಲಾಗಿದೆ. ತಾಲ್ಲೂಕು ಅಥವಾ ಜಿಲ್ಲಾಡಳಿತ ಸ್ಪಂದಿಸದೆ ಹೋಗಿದ್ದರಿಂದ ಗುರುವಾರ ಪುನಃ ಕನ್ನಡ ಸೇನೆ ಕರ್ನಾಟಕದ ಸಾರಥ್ಯದಲ್ಲಿ ಮಹಿಳೆಯರು ತಾಪಂ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಗುರವಾರ ಬೆಳಿಗ್ಗೆ ಧರಣಿ ಆರಂಭಗೊಂಡ ಸ್ವಲ್ಪೆ ಸಮಯದಲ್ಲಿ ಧರಣಿಯಲ್ಲಿ ಪಾಲ್ಗೊಂಡಿದ್ದ ಗರ್ಭಿಣಿ ನಿರ್ಮಲ ಹಿರೇಮಠ ಅಸ್ವಸ್ತಗೊಳ್ಳುತ್ತಿದ್ದಂತೆ ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ ಅವರ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗರ್ಭಿಣಿಯಾಗಿರುವುದರಿಂದ ವೈದ್ಯರು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಸೇರ‌್ಪಡೆ ಮಾಡಲು ಸೂಚಿಸಿದರು.

ಮಹಿಳೆಯರಿಗೆ ಸಮೂಹಿಕ ಶೌಚಾಲಯ ನಿರ್ಮಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಕೂಡಲೆ ಅಮಾನತು ಮಾಡಬೇಕು. ಅಧಿಕಾರಿಗಳ ಮಲತಾಯಿ ಧೋರಣೆಯಿಂದ ಮಹಿಳೆಯರ ಮಾನ ಹರಾಜಿಗೆ ಹಾಕಿದಂತಾಗಿದೆ. ಬಯಲು ಮುಕ್ತ ಸಮಾಜ ನಿರ್ಮಾಣ ಮಾಡುವ ಅಧಿಕಾರಿಗಳು ಮಹಿಳೆಯರನ್ನು ಬಹಿರ್ದೆಷೆಗೆ ಬಯಲಿಗೆ ತೆರಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೂಡಲೆ ಶೌಚಾಲಯ ಕೆಲಸ ಆರಂಭಿಸಬೇಕು. ಅಧಿಕಾರಿಗಳು ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಮೀನಾ ಮೇಷ ನಡೆಸುತ್ತಿರುವುದನ್ನು ಪ್ರತಿಭಟಿಸಲು ಗುರುಗುಂಟಾದ 3ನೇ ವಾರ್ಡ್‌ನ ಮಹಿಳೆಯರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿಯೆ ಮಲ ಮೂತ್ರ ವಿಸರ್ಜನೆ ನಡೆಸುವ ಮೂಲಕ ಸರ್ಕಾರದ ನಿರ್ಲಕ್ಷವನ್ನು ವಿನೂತನವಾಗಿ ಪ್ರತಿಭಟಿಸಲಾಗುವುದು ಎಂದು ಕನ್ನಡ ಸೇನೆ ಕರ್ನಾಟಕದ ತಾಲ್ಲೂಕು ಅಧ್ಯಕ್ಷ ಶರಣೋಜಿ ಪವಾರ ಎಚ್ಚರಿಕೆ ನೀಡಿದ್ದಾರೆ.

ಸತ್ಯಾಗ್ರಹದಲ್ಲಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಇಂದಿರಾಬಾಯಿ, ಮುಖಂಡರಾದ ಮಲ್ಲಿಕಾರ್ಜುನ ನಾಡಗೌಡ್ರ, ಶಿವು ಎಚ್, ನಿರ್ಮಲ, ಖಾಸಂಬಿ, ಗಂಗಮ್ಮ, ಅಕ್ಕಮ್ಮ, ಶಂಕರಮ್ಮ, ಶರೀಫಾಬೆಗಂ, ಸಿದ್ದಮ್ಮ, ಕಾಶಿಬಾಯಿ, ರೇಣುಕಮ್ಮ, ದುರಗಮ್ಮ ನಾಯಕ, ಶಾರದ, ಜ್ಯೋತಿ, ಶಿವಬಸಮ್ಮ, ಇಮಾಂಬಿ, ಗವರಬಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.