ADVERTISEMENT

ಉಳ್ಳವರಿಗೆ ಆಶ್ರಯ ಮನೆಗಳ ಹಂಚಿಕೆ: ದೂರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 7:50 IST
Last Updated 16 ಏಪ್ರಿಲ್ 2012, 7:50 IST

ಜಾಲಹಳ್ಳಿ: ಸ್ಥಳೀಯ ಗ್ರಾಮ ಪಂಚಾಯತಿಗೆ 2011-12ನೇ ಸಾಲಿಗೆ ಇಂದಿರಾ ಆವಾಜ್ ಯೋಜನೆಯಡಿ ಸುಮಾರು 1100  ಮನೆಗಳು ಮಂಜೂರಾಗಿದ್ದು ಅವುಗಳನ್ನು ಬಡ ಫಲಾನುಭವಿಗಳನ್ನು ಗುರ್ತಿಸದೇ ಶ್ರೀಮಂತರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳ ಕುಟುಂಬಗಳ ಸದಸ್ಯರಿಗೆ ನೀಡಿರುವುದನ್ನು ರದ್ದುಪಡಿಸಬೇಕು ಮತ್ತು ಪುನಃ ಗ್ರಾಮಸಭೆ ನಡೆಸಿ ಬಡ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಮಾಜಿ ಗ್ರಾ.ಪಂ ಸದಸ್ಯ ರಾಜಾ ವಾಸುದೇವನಾಯಕ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇಂದಿರಾ ಆವಾಜ್ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತಿಗೆ ಮಂಜೂರಾಗಿರುವ ಮನೆಗಳನ್ನು ಗ್ರಾಮಸಭೆ ನಡೆಸಿ ಬಡ ಫಲಾನುಭವಿಗಳನ್ನು ಗುರ್ತಿಸಿ ಪಟ್ಟಿ ಮಾಡಬೇಕೆನ್ನುವ ರಾಜೀವ್‌ಗಾಂಧಿ ವಸತಿ ನಿಗಮದ ಸ್ವಷ್ಟ ಆದೇಶ ಇದ್ದರೂ ಸಹ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಗ್ರಾಮಸಭೆ ನಡೆಸಿರುವ ಬಗ್ಗೆ ಮಾಹಿತಿ ಹಕ್ಕು ಕಾನೂನು ಅಡಿಯಲ್ಲಿ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದರೆ  ಗ್ರಾಮಸಭೆ ನಡೆಸಿಲ್ಲ ಎನ್ನುವ ಲಿಖಿತ ಮಾಹಿತಿಯನ್ನು ಪಿಡಿಒ ನೀಡಿದ್ದಾರೆ. ಆದ್ದರಿಂದ ಗ್ರಾಮಸಭೆ ನಡೆಸದೇ ಸಿದ್ಧಪಡಿಸಿದ ಪಟ್ಟಿಯನ್ನು ರದ್ದುಪಡಿಸಿ ತಪ್ಪು ಎಸಗಿದ ಅಧಿಕಾರಿ ಹಾಗೂ ಗ್ರಾ.ಪಂ ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.