ADVERTISEMENT

ಒಂದು ಹನಿ ನೀರೂ ಸೃಷ್ಟಿ ಮಾಡಲು ಆಗಲ್ಲ: ಭಟ್ಟಲ್‌ವಾರ್‌

ವಿಶ್ವ ಜಲ ದಿನಾಚರಣೆಯಲ್ಲಿ ರಾಮದಾಸ ಭಟ್ಟಲ್‌ವಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 12:26 IST
Last Updated 23 ಮಾರ್ಚ್ 2018, 12:26 IST
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಪುಣೆ ನೆಟಾಫಿಮ್‌ ಇರಿಗೇಶನ್‌ನ ಸಮುದಾಯ ನೀರಾವರಿ ವಿಭಾಗದ ವ್ಯವಹಾರ ಮುಖ್ಯಸ್ಥ ರಾಮದಾಸ ಭಟ್ಟಲ್‌ವಾರ್‌ ಉದ್ಘಾಟಿಸಿದರು
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಪುಣೆ ನೆಟಾಫಿಮ್‌ ಇರಿಗೇಶನ್‌ನ ಸಮುದಾಯ ನೀರಾವರಿ ವಿಭಾಗದ ವ್ಯವಹಾರ ಮುಖ್ಯಸ್ಥ ರಾಮದಾಸ ಭಟ್ಟಲ್‌ವಾರ್‌ ಉದ್ಘಾಟಿಸಿದರು   

ರಾಯಚೂರು: ಒಂದು ಹನಿ ನೀರು ತಯಾರಿಸಲು ಯಾರಿಂದಲೂ ಆಗಲ್ಲ. ಆದ್ದರಿಂದ ಪ್ರತಿಯೊಬ್ಬರೂ ನೀರಿನ ಪ್ರಾಮುಖ್ಯತೆ ಅರಿತುಕೊಂಡು ನೀರಿನ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದು ಪುಣೆಯ ನೆಟಾಫಿಮ್‌ ಇರಿಗೇಶನ್‌ನ ಸಮುದಾಯ ನೀರಾವರಿ ವಿಭಾಗದ ವ್ಯವಹಾರ ಮುಖ್ಯಸ್ಥ ರಾಮದಾಸ ಭಟ್ಟಲ್‌ವಾರ್‌ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಭಾರತೀಯ ಕೃಷಿ ಎಂಜಿನಿಯರುಗಳ ಸಂಘ, ಕೃಷಿ ತಂತ್ರಜ್ಞರ ಸಂಸ್ಥೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಹಾಗೂ ಇತರೆ ಸಂಘ– ಸಂಸ್ಥೆಗಳಿಂದ ಗುರುವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೀರನ್ನು ಸರಿಯಾದ ಕ್ರಮದಲ್ಲಿ ಬಳಸುವ ಮೂಲಕ ನೀರಿನ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ADVERTISEMENT

ಜನಸಂಖ್ಯೆ ಹೆಚ್ಚುತ್ತಿರುವುದರಿಂದ ನೀರು ಹಾಗೂ ಆಹಾರದ ಬೇಡಿಕೆಯೂ ಹೆಚ್ಚಾಗುತ್ತಿದೆ. ಜೊತೆಗೆ ಬದಲಾದ ಜೀವನ ಶೈಲಿಯಿಂದ ಹಾಗೂ ಇತರೆ ಕಾರಣಗಳಿಂದ ನೀರಿನ ಮೇಲಿನ ಅವಲಂಬನೆ ಹೆಚ್ಚಾಗಿದೆ ಎಂದು ತಿಳಿಸಿದರು.

ಕೃಷಿಗೆ ಹೆಚ್ಚಿನ ಪ್ರಮಾಣದ ನೀರು ಅಗತ್ಯವಾಗಿದ್ದು, ಕುಡಿಯುವ ಹಾಗೂ ಕೈಗಾರಿಕೆಗಳ ಉದ್ದೇಶಕ್ಕೆ ನೀರನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಆದ್ದರಿಂದ ಲಭ್ಯವಿರುವ ನೀರನ್ನು ಕ್ರಮಬದ್ಧವಾಗಿ ಬಳಕೆ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಹನಿ ನೀರಾವರಿಯ ಮೂಲಕ ಹೆಚ್ಚಿನ ಭೂಮಿಗೆ ನೀರು ಒದಗಿಸುವ ಮೂಲಕ ಹೆಚ್ಚಿನ ಉತ್ಪಾದನೆ ಮಾಡಬೇಕು ಎಂದರು.

ಭಾರತೀಯ ವಿಭಾಗ ರಾಯಲ್ ಹಾಸ್ಕೋನಿಂಗ್ ಸಲಹಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕೆ.ವಿ.ಭಟ್ ಮಾತನಾಡಿ, ಭೂಮಿಯ ಮೇಲ್ಮೈನ ನೀರಿಗೂ ಹಾಗೂ ಅಂತರ್ಜಲದ ನೀರಿಗೂ ನಿಗೂಢವಾದ ಸಂಬಂಧವಿದ್ದು, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೀರಿನ ಬಳಕೆ ಮಾಡಬೇಕು ಎಂದು ಹೇಳಿದರು.

ಭೂಮಿಯ ಮೇಲ್ಮೈನಲ್ಲಿ ಸಿಗುವ ನೀರಿನ ಪ್ರಮಾಣ ಕಡಿಮೆಯಾದರೆ, ಅಂತರ್ಜಲದಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗಲಿದೆ. ಅದೆರೀತಿ ಅಂತರ್ಜಲದಲ್ಲಿನ ನೀರಿನ ಪ್ರಮಾಣ ಕಡಿಮೆಯಾದರೆ ಭೂಮಿ ಮೇಲ್ಮೈನಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗಲಿದೆ ಎಂದು ವಿವರಿಸಿದರು.

ರಾಜ್ಯದ 102 ತಾಲ್ಲೂಕುಗಳಲ್ಲಿ ವಿಕೋಪ ಪರಿಸ್ಥಿತಿಯಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಇಂತಹ ಪರಿಸ್ಥಿತ ಬರುವುದು ದೂರವಿಲ್ಲ. ಆದ್ದರಿಂದ ನೀರನ್ನು ಶಾಸ್ತ್ರೋಕ್ತವಾಗಿ ಬಳಕೆ ಮಾಡುವುದು ಅಗತ್ಯವಾಗಿದೆ. ಅಂತರ್ಜಲವನ್ನು ಹೆಚ್ಚಿಸುವ ಕಾರ್ಯವನ್ನು ನಿರಂತರವಾಗಿ ನಡೆಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ಹಿರಿಯರನ್ನು ಬೈಯುವುದು ಹಾಗೂ ಹೊಡೆಯುವುದು ಮಾಡುವ ಸಾಧ್ಯತೆಯಿದೆ ಎಂದರು.

ಕೃಷಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಗುತ್ತಿ ಜಂಬುನಾಥ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಿ.ಎಂ.ಚಂದರಗಿ, ಡೀನ್ ಹಳೆಪ್ಯಾಟಿ, ಉದಯಕುಮಾರ ನಿಡೋಣಿ, ಎಸ್‌.ಎಂ.ಸಿದ್ದಾರೆಡ್ಡಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.