ADVERTISEMENT

ಔಷಧೀಯ ಸಸ್ಯಗಳ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 9:05 IST
Last Updated 3 ಜನವರಿ 2012, 9:05 IST

ಮಾನ್ವಿ: ಉತ್ತಮ ಆರೋಗ್ಯ ಹಾಗೂ ಬೆಳವಣಿಗೆಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಲ್ಲಿ ಔಷಧೀಯ ಸಸ್ಯಗಳ ಮಹತ್ವದ ಕುರಿತು  ತಿಳಿವಳಿಕೆ ಮೂಡಿಸುವುದು ಅಗತ್ಯ ಎಂದು ಪಟ್ಟಣದ ಕೆಪಿಎಸ್‌ವಿಎಸ್   ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ.ಪ್ರವೀಣ್ ಹೇಳಿದರು.

ಈಚೆಗೆ ಪಟ್ಟಣದ ಶ್ರೀಪಂಪಾ ವಿರೂಪಾಕ್ಷೇಶ್ವರ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಅರಣ್ಯ ಹಾಗೂ ಪರಿಸರ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ದೃಷ್ಟಿಯಿಂದ ಆರಂಭವಾದ ಇಕೊ-ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ನೀಡಿದ ಕೊಡುಗೆಯಾಗಿದೆ. ನಮ್ಮ ಪರಿಸರದಲ್ಲಿರುವ ಹಲವು ಸಸ್ಯಗಳಲ್ಲಿನ ಔಷಧೀಯ ಗುಣಗಳನ್ನು ಆಯುರ್ವೇದ ಪದ್ಧತಿಯ ಮೂಲಕ ಜಗತ್ತಿಗೆ ಪರಿಚಯಿಸಲಾಯಿತು. ಇಂದಿನ ದಿನಗಳಲ್ಲಿ ಔಷಧೀಯ ಸಸ್ಯಗಳ ಬಳಕೆ ಹಾಗೂ ಮಹತ್ವದ ಕುರಿತು ಎಲ್ಲರಿಗೂ ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ.  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲಿ ಇಕೊ-ಕ್ಲಬ್ ಆರಂಭಿಸಿರುವುದು ಶ್ಲಾಘನೀಯ ಎಂದು ಹೇಳಿದರು.  ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಪ್ರಸನ್ನಕುಮಾರ, ಮಲ್ಲನಗೌಡ ಪಾಟೀಲ್ ದಿದ್ದಗಿ, ದೈಹಿಕ ಶಿಕ್ಷಣ ನಿರ್ದೇಶಕ ವಿರುಪಣ್ಣ ಪಾಟೀಲ್ ವೇದಿಕೆಯಲ್ಲಿದ್ದರು. ಉಪನ್ಯಾಸಕ ಶಂಕರ್ ನಿರೂಪಿಸಿದರು.  `ಔಷಧೀಯ ಸಸ್ಯಗಳ ಮಹತ್ವ~ ಕುರಿತು ಹಮ್ಮಿಕೊಳ್ಳಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಸಾದಿಕ್ ಬೇಗಂ, ನಾಗೇಶ್ ಮೂರ್ತಿ ಹಾಗೂ ಗೂಳಪ್ಪಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.