ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಕೂ.ಗಿ.ಗಿರಿಯಪ್ಪಗೆ ಸನ್ಮಾನ

ಬರಡನಹಳ್ಳಿ ಕೃಷ್ಣಮೂರ್ತಿ
Published 22 ನವೆಂಬರ್ 2017, 6:06 IST
Last Updated 22 ನವೆಂಬರ್ 2017, 6:06 IST

ಕನಕಪುರ: ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡುವ ಸನ್ಮಾನಕ್ಕೆ ಕನಕಪುರ ತಾಲ್ಲೂಕಿನಿಂದ ಸಾಹಿತಿ ಕೂ.ಗಿ.ಗಿರಿಯಪ್ಪ ಆಯ್ಕೆಯಾಗಿದ್ದಾರೆ. ಅವರು ನಗರದ ಐ.ಪಿ. ಪಿ. ಆಸ್ಪತ್ರೆ ಹಿಂಭಾಗದ ಹನುಮಂತನಗರ ಬಡಾವಣೆಯ ಕೂ.ಗಿ.ಗಿರಿಯಪ್ಪ ರಸ್ತೆಯಲ್ಲಿ ವಾಸವಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾದ ಅವರು ಸರ್ಕಾರಿ ಶಾಲೆಗಳಲ್ಲಿ 37ಕ್ಕೂ ಹೆಚ್ಚು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜತೆಗೆ ಗೃಹ ರಕ್ಷಕ ಇಲಾಖೆಯ ಗೃಹರಕ್ಷಕ ದಳದ ಘಟಕಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ವೃತ್ತಿಯ ಜತೆ ಜತೆಗೆ ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರದ ಅಭಿರುಚಿ ಹೊಂದಿದ್ದು ಭಾರತ ಸೇವಾದಳ, ಕಸಾಪ, ಗಮಕ ಕಲಾ ಪರಿಷತ್ತು, ಜಿಲ್ಲಾ ಲೇಖಕರ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನಿವೃತ್ತಿಯ ನಂತರವೂ ಕನ್ನಡ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷರಾಗಿ, ಜಿಲ್ಲಾ ಲೇಖಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ, ಗಮಕ ಕಲಾ ಪತಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷರಾಗಿ, ಸೇವಾದಳದ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದವರು. ಅವರು ನಿರಂತರ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು
ವಿಸ್ತರಿಸಿದ್ದಾರೆ.

ADVERTISEMENT

ಎಂಟು ಕವನ ಸಂಕಲನ, ಎರಡು ಕಾದಂಬರಿ, ನಾಲ್ಕು ಜೀವನ ಚರಿತ್ರೆ, ಸಂಪಾದಕೀಯ ಕೃತಿ, ಪ್ರಬಂಧಗಳು ಸೇರಿದಂತೆ 54 ಕೃತಿಗಳನ್ನು ರಚಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಶಸ್ತಿ, ಗೃಹ ರಕ್ಷಕದಳದಿಂದ ರಾಷ್ಟ್ರ ಪ್ರಶಸ್ತಿ, ಸಂಘ ಸಂಸ್ಥೆಗಳಿಂದ ಅರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಕೌಟಿಲ್ಯ ನ್ಯಾಷನಲ್‌ ಎಕ್ಸಲೆನ್ಸ್‌ ಅವಾರ್ಡ್‌, ಡಾ.ಬಿ.ಆರ್.ಅಂಬೇಡ್ಕರ್‌ ನ್ಯಾಷನಲ್‌ ಅವಾರ್ಡ್‌ ಸೇರಿದಂತೆ 34 ಕ್ಕೂ ಹೆಚ್ಚು ಸನ್ಮಾನ, 50ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ.

ರಾಮನಗರ ಜಿಲ್ಲೆಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ–2017ರ ಪ್ರಶಸ್ತಿಯು ದೊರಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಉತ್ತಮ ಕೆಲಸಗಳನ್ನು ಗುರುತಿಸಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ರಾಮನಗರ ಜಿಲ್ಲೆಗೆ ಆಯ್ಕೆ ಮಾಡಿ ನವೆಂಬರ್‌ 24 ರಿಂದ 26ರ ತನಕ ನಡೆಯುವ 3 ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನ ನೀಡಿದೆ.

ಮೈಸೂರಿನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಲು ಜಿಲ್ಲೆಯಿಂದ ಆಯ್ಕೆಯಾಗಿ ಸಮಾರಂಭಕ್ಕೆ ಹೋಗುತ್ತಿರುವ ಗಿರಿಯಪ್ಪ ಅವರನ್ನು ತಾಲ್ಲೂಕಿನ ಜನತೆ ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.