ADVERTISEMENT

‘ಕಮಲ ಗೆಲ್ಲಿಸಿದರೆ ಮನೆಗೆ ಲಕ್ಷ್ಮಿಯೇ ಬಂದಂತೆ’

ಸಿಂಧನೂರಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್ ಷೋ

​ಪ್ರಜಾವಾಣಿ ವಾರ್ತೆ
Published 9 ಮೇ 2018, 13:23 IST
Last Updated 9 ಮೇ 2018, 13:23 IST

ಸಿಂಧನೂರು: ಕೈಯಲ್ಲಿ ಲಕ್ಷ್ಮಿ ಇರೋಲ್ಲ. ಬದಲಿಗೆ ಕಮಲ ಲಕ್ಷ್ಮಿಯ ನೆಲೆ. ಹಾಗಾಗಿ ಕಮಲಕ್ಕೆ ಮತ ಹಾಕಿ ಬಿಜೆಪಿ ಗೆಲ್ಲಿಸಿದರೆ ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮಿಯೇ ಬಂದಂತೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಸಿಂಧನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಪರ ಮಂಗಳವಾರ ನಗರದಲ್ಲಿ ರೋಡ್ ಷೋ ನಡೆಸಿ ಮತಯಾಚಿಸಿದ ಅವರು ನಂತರ ಇಲ್ಲಿಯ ಮಹಾತ್ಮಗಾಂಧಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಪಂಚವೇ ಭಾರತದತ್ತ ನೋಡುತ್ತಿದೆ. ಬಡವರ, ರೈತರ, ಕಾರ್ಮಿಕರ ಹಾಗೂ ಯುವಕರ ಪರ ಯೋಜನೆಗಳನ್ನು ಜಾರಿಗೊಳಿಸಿ, ಸ್ವಚ್ಛ ಹಾಗೂ ದಕ್ಷ ಆಡಳಿತ ನೀಡಲಾಗುತ್ತಿದೆ. ಮೋದಿಯವರ ಅಭಿವೃದ್ಧಿಯ ಚಿಂತನೆಗೆ ದೇಶದ ಜನತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ADVERTISEMENT

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ರೈತರ ಹಾಗೂ ನೇಕಾರರ ₹1 ಲಕ್ಷದವರೆಗಿನ ಸಾಲಮನ್ನಾ ಮಾಡಲಾಗುವುದು. ಪಂಪ್‌ಸೆಟ್‌ಗೆ ದಿನಕ್ಕೆ 10 ಗಂಟೆ 3 ಫೇಸ್ ವಿದ್ಯುತ್, ನೀರಾವರಿಗೆ ₹1.5 ಲಕ್ಷ ಕೋಟಿ ಮೀಸಲುಎಂದು ಸ್ಮೃತಿ ಇರಾನಿ ಮನವಿ ಹೇಳಿದರು.

**
ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ದೇಶ ಕಟ್ಟುವ ಕನಸು ಸಾಕಾರಗೊಳ್ಳಬೇಕಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು
– ಸ್ಮೃತಿ ಇರಾನಿ, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.