ADVERTISEMENT

ಕರೆದವರ ಮನೆ ಬಾಗಿಲಿಗೆ ಹಣ್ಣು, ತರಕಾರಿ

ಪಿ.ಹನುಮಂತು
Published 10 ಡಿಸೆಂಬರ್ 2017, 6:30 IST
Last Updated 10 ಡಿಸೆಂಬರ್ 2017, 6:30 IST
ಕೃಷಿಮೇಳದಲ್ಲಿ ಸ್ಥಾಪನೆ ಮಾಡಿರುವ ‘ಫಾರ್ಮ ಬಂಡಿ– ಕೆ.ಎ.36’ ಮಳಿಗೆಯಲ್ಲಿ ತರಕಾರಿ ಹಾಗೂ ಹಣ್ಣುಗಳು ಮಾರಾಟಕ್ಕೆ ಇಡಲಾಗಿದೆ
ಕೃಷಿಮೇಳದಲ್ಲಿ ಸ್ಥಾಪನೆ ಮಾಡಿರುವ ‘ಫಾರ್ಮ ಬಂಡಿ– ಕೆ.ಎ.36’ ಮಳಿಗೆಯಲ್ಲಿ ತರಕಾರಿ ಹಾಗೂ ಹಣ್ಣುಗಳು ಮಾರಾಟಕ್ಕೆ ಇಡಲಾಗಿದೆ   

ರಾಯಚೂರು: ಕಳೆದ ಆರು ತಿಂಗಳ ಹಿಂದೆ ರಾಯಚೂರು ನಗರದಲ್ಲಿ ಆರಂಭವಾಗಿರುವ ‘ಫಾರ್ಮ ಬಂಡಿ– ಕೆ.ಎ.36’ ಕರೆದವರ ಮನೆ ಬಾಗಿಲಿಗೆ ತರಕಾರಿ ಹಣ್ಣುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದು, ಕೃಷಿಮೇಳದಲ್ಲಿ ಈ ಮಳಿಗೆಯು ಗಮನ ಸೆಳೆಯುತ್ತಿದೆ.

‘ಫಾರ್ಮ ಬಂಡಿ– ಕೆ.ಎ..36’ ಇದು ಸಾರಿಗೆ ಇಲಾಖೆ ನೀಡಿರುವ ನೋಂದಣಿ ಸಂಖ್ಯೆಯಲ್ಲ. ಇದು ರೈತರಿಂದ ತರಕಾರಿ ಹಾಗೂ ಹಣ್ಣುಗಳನ್ನು ನೇರವಾಗಿ ಖರೀದಿಸಿ, ಮಧ್ಯವರ್ತಿಗಳ ಪ್ರಮೇಯವಿಲ್ಲದೆ ಗ್ರಾಹಕರ ಮನೆಗೆ ತಲುಪಿಸುವ ಬಂಡಿಯಾಗಿದೆ. ಒಣ ಹಣ್ಣುಗಳನ್ನು (ಡ್ರೈ ಫ್ರೂಟ್ಸ್‌)ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಸದ್ದುಗದ್ದಲವಿಲ್ಲದೆ ರೈತರ ಹಾಗೂ ಗ್ರಾಹಕರಿಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತಿದೆ.

ಎಂಬಿಎ ಪದವಿಧರನಾಗಿರುವ ರಾಯಚೂರಿನ ಮೂಲದವರಾದ ಕೆ.ಎಸ್.ಉದಯಕಿರಣ ‘ಫಾರ್ಮ ಬಂಡಿ– ಕೆ.ಎ..36’ನ್ನು ಸ್ಥಾಪನೆ ಮಾಡಿದ್ದು, ಇದಕ್ಕೆ ‘ಕೃಷಿತೋ ನಾಸ್ತಿ ದುರ್ಬಿಕ್ಷಂ’ ಎಂಬ ಘೋಷವಾಕ್ಯ ಹಾಕಿಕೊಳ್ಳಲಾಗಿದೆ. ಇದರ ಅರ್ಥ ಕೃಷಿ ವಿನಾಶದಿಂದ ದೇಶದ ಅವನತಿ ಎಂಬುದಾಗಿದೆ.

ADVERTISEMENT

ರೈತರಲ್ಲಿಗೆ ಹೋಗಿ ತರಕಾರಿ ಹಾಗೂ ಹಣ್ಣುಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿಗದಿ ಮಾಡಿರುವ ಆಯಾ ದಿನದ ದರದಲ್ಲೇ ಖರೀದಿ ಮಾಡಿಕೊಂಡು ಬರಲಾಗುತ್ತದೆ. ಇದರಿಂದ ರೈತರಿಗೆ ಸಾಗಾಟದ ವೆಚ್ಚವೂ ಉಳಿಯಲಿದೆ ಎಂದು ಕೆ.ಎಸ್.ಉದಯ ಕಿರಣ ಮಾಹಿತಿ ಹಂಚಿಕೊಂಡರು.

ಗ್ರಾಹಕರು ಮಾರುಕಟ್ಟೆಗೆ ಬಂದು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡುವ ಅಗತ್ಯವೇ ಇಲ್ಲ. ‘ಫಾರ್ಮ ಬಂಡಿ– ಕೆ.ಎ..36’ ಆ್ಯಪ್‌ ಹಾಗೂ ವೆಬ್‌ಸೈಟ್‌ ಕೂಡ ಮಾ ಡಲಾಗಿದೆ. ಇಲ್ಲಿ ಕೂಡ ಗ್ರಾಹಕರು ಖರೀದಿ ಮಾಡಬಹುದು. ಅಲ್ಲದೇ ಮೊಬೈಲ್‌ ಮೂಲಕವೂ ಖರೀದಿ ಮಾಡಬಹುದಾಗಿದ್ದು, 9743263636, 9743763636ಗೆ ಸಂದೇಶ (ಮೆಸೇಜ್‌) ಕಳುಹಿಸಿದರೂ ಗ್ರಾಹಕರ ಮನೆ ಬಾಗಿಲಿಗೆ ಪದಾರ್ಥಗಳನ್ನು ತಲುಪಿಸಲಾಗುವುದು ಎಂದರು.

ವಾರಂತ್ಯದಲ್ಲಿ (ವೀಕೆಂಡ್‌) ಹಾಗೂ ಹಬ್ಬದ ಸಂದರ್ಭಗಳಲ್ಲಿ ವಿವಿಧ ಪದಾರ್ಥಗಳನ್ನು ಒಟ್ಟಿಗೆ ರಿಯಾಯಿತಿ ದರದಲ್ಲಿ (ಕೊಂಬೊ ಆಫರ್‌) ಒದಗಿಸುವ ಕಾರ್ಯವನ್ನು ಮಾಡಲಾಗಿದೆ. ಈಗಾಗಲೇ 300 ರಷ್ಟು ಗ್ರಾಹಕರು ‘ಫಾರ್ಮ ಬಂಡಿ– ಕೆ.ಎ..36’ ಯಿಂದ ತರಕಾರಿ ಪಡೆಯುತ್ತಿದ್ದಾರೆ. ಉತ್ತಮ ಸ್ಪಂದನೆ ದೊರೆತ್ತಿದೆ. ನಾಲ್ಕು ಜನರಿಂದ ಮನೆಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

* * 

ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಗುಣಮಟ್ಟದ ತರಕಾರಿ ಹಾಗೂ ಹಣ್ಣುಗಳನ್ನೇ ಮಾರಾಟ ಮಾಡಲಾಗುತ್ತಿದ್ದು, ಇವು ಆರೋಗ್ಯಕರ ಆಹಾರವಾಗಿವೆ ಕೆ.ಎಸ್‌.ಉದಯಕಿರಣ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.