ADVERTISEMENT

ಕಳೆನಾಶಕದಿಂದ ಬೆಳೆನಾಶ: ಕೃಷಿ ಅಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 9:35 IST
Last Updated 7 ಸೆಪ್ಟೆಂಬರ್ 2011, 9:35 IST

ಜಾಲಹಳ್ಳಿ: ಕಳೆನಾಶಕ ಬಳಸಿ ಬೆಳೆನಾಶ ಮಾಡಿಕೊಂಡ ರೈತರ ಹೊಲಗಳಿಗೆ ಸೋಮವಾರ ತಾಲ್ಲೂಕು ಕೃಷಿ ಅಧಿಕಾರಿ ಮಾಹದೇವಪ್ಪ ಭೇಟಿ ನೀಡಿ   ಪರಿಶೀಲಿಸಿದರು.

  ಸಮೀಪದ ಕಮ್ಮಲದಿನ್ನಿ ಗ್ರಾಮದ ಮಾಳಪ್ಪ ನಾಯಕ ಎನ್ನುವ ರೈತನೋರ್ವನು ತನ್ನ 20ಎಕರೆ ಜಮೀನಿನಲ್ಲಿ ಬೆಳೆದ ಭತ್ತಕ್ಕೆ ಕಳೆನಾಶಕ  ಔಷಧ ಬಳಸಿದ್ದರಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿರುವುದನ್ನು ಅಧಿಕಾರಿ ಸ್ವತಃ ವೀಕ್ಷಿಸಿದರು.

ಈ ಸಂದರ್ಭದಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು ಘಟನೆಯ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸ್ಥಳೀಯ ರೈತ ಸಂಪರ್ಕ ಕೇಂದ್ರದಿಂದ ಕೇವಲ 60ಕೆ.ಜಿ ಮಾತ್ರ ಕಳೆನಾಶಕ ವಿತರಣೆ ಮಾಡಲಾಗಿದ್ದು, ಆ ಎಲ್ಲಾ ರೈತರ ಮಾಹಿತಿ ಪಡೆದು ವಿಜ್ಞಾನಿಗಳನ್ನು ಕರೆಯಿಸಿ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ರೈತರಿಗೆ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದಿಂದ ಯಾವುದೇ ಔಷಧ ಹಾಗೂ ಬೀಜ ಪಡೆದರೂ ಸಹ ರಷೀದಿ ಮತ್ತು ಮಾಹಿತಿ ನೀಡದೇ ಸ್ಥಳೀಯ ರೈತ ಸಂಪರ್ಕ ಕೇಂದ್ರದ   ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ನರಸಣ್ಣ ನಾಯಕ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ದೂರು ನೀಡಿದರು.

ಇದೇ ಸಮಸ್ಯೆಗೆ ಸಂಬಂಧಿಸಿದಂತೆ ಈಚೆಗೆ `ಪ್ರಜಾವಾಣಿ~ `ಬಳಸಿದ್ದು ಕಳೆನಾಶಕ ಆಗಿದ್ದು ಬೆಳೆನಾಶ~ ಎಂಬ ಶಿರ್ಷಿಕೆಡಿಯಲ್ಲಿ ವರದಿ      ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT