ADVERTISEMENT

`ಕಾಂಗ್ರೆಸ್ ಕಾರ್ಯಾಲಯದ ಎದುರು 19ರಂದು ಧರಣಿ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 5:53 IST
Last Updated 5 ಸೆಪ್ಟೆಂಬರ್ 2013, 5:53 IST

ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಯ 95ರಿಂದ 157 ಕಿಮೀಗಳವರೆಗೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿ ಸೆ. 19ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದ ಎದುರು ಧರಣಿ ನಡೆಸಲಾಗುವುದು ಎಂದು ಜನ ಸಂಗ್ರಾಮ ಪರಿಷತ್‌ನ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಗಣಿ ಹಗರಣ, ಭ್ರಷ್ಟಾಚಾರ, ಅವ್ಯವಹಾರಗಳ ಬೇಸತುಗೊಂಡು, ರಾಜ್ಯದ ಜನರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬ ಆಶಾಭಾವನೆ ಹೊಂದಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಭರವಸೆಯನ್ನು ನೀಡಿದ್ದರು. ರಾಜ್ಯದ ಬಜೆಟ್‌ನಲ್ಲಿ 17 ಸಾವಿರ ಕೋಟಿ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ.ಆದರೆ, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಬಗ್ಗೆ ಯಾವುದೇ ಪ್ರಸ್ತಾಪನೆಯಾಗಿಲ್ಲ ಎಂದು ಆಪಾದಿಸಿದರು.

ರಾಜ್ಯದ ಆಡಳಿತದ ಪಕ್ಷದ ಕಾಂಗ್ರೆಸ್ ಪಕ್ಷದ ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಸಂತಕುಮಾರ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಾಂಗ್ರೆಸ್ ಮುಖಂಡ ಎನ್.ಎಸ್ ಬೋಸರಾಜ ಅವರು ವಿರೋಧ ಪಕ್ಷದಲ್ಲಿ ಸಂದರ್ಭದಲ್ಲಿ ನೀರಾವರಿ ಯೋಜನೆ ಸೇರಿದಂತೆ ಅನೇಕ ಹೋರಾಟಗಳನ್ನು ರೂಪಿಸುತ್ತಿದ್ದರು. ಆದರೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಮೌನವಹಿಸಿಕೊಂಡಿದ್ದಾರೆ ಎಂದು ಹೇಳಿದರು.

ನಾರಾಯಣಪುರ ಬಲದಂಡೆ ಕಾಲುವೆಯ 95ರಿಂದ 157 ಕಿಮೀಗಳವರೆಗೆ ವಿಸ್ತರಣೆಗೆ ಯಾವುದೇ ಅಡತಡೆಗಳಿಲ್ಲ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಹಾಗೂ ನೀರು ಹಂಚಿಕೆ ಸಂಬಂಧಿಸಿದ ಕೃಷ್ಣ ನ್ಯಾಯಾಧೀಕರಣ ತೀರ್ಪು ನೀಡಿದೆ. ಇರುವ ಸಮಸ್ಯೆಗಳ ಪರಿಹಾರವಾಗಿದೆ. ಈ ಭಾಗದ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇದೆ ಎಂದು ದೂರಿದರು.

ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣೆಗೆ ಸಮಸ್ಯೆಯನ್ನು ರಾಜಕೀಯ ಸಮಸ್ಯೆಯನ್ನಾಗಿ ಪರಿಗಣನೆಗೆ ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕು. ಮುಂದಿನ ದಿಗಳಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜ ಹವಾಲ್ದಾರ್, ನಗರದ ಶಾಸಕ ಶಿವರಾಜ ಪಾಟೀಲ್ ಅವರ ಮನೆಗಳ ಮುಂದೆಯೂ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ, ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದ 371ಕಲಂ ತಿದ್ದುಪಡಿಗೆ ಕೈಗೊಂಡ ಹೋರಾಟದ ಮಾದರಿಯಲ್ಲಿಯೇ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಜನಸಂಗ್ರಾಮ ಪರಿಷತ್‌ನ ಪದಾಧಿಕಾರಿಗಳಾದ ಅಕ್ಬರ ನಾಗುಂಡಿ, ಬಂಡೇಪ್ಪಗೌಡ ಐ ರೆಡ್ಡಿ, ಬಿ.ಬಸರಾಜ, ವೆಂಕಟೇಶ ಯಾದವ್, ಪರಪ್ಪ ನಾಗೋಲಿ, ವೆಂಕೋಬರಾವ್ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.