ADVERTISEMENT

ಕಾಮಗಾರಿ ಸ್ಥಗಿತ- ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 5:31 IST
Last Updated 1 ಜುಲೈ 2013, 5:31 IST

ಜಾಲಹಳ್ಳಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.  ನಿಲ್ದಾಣದ - ಮೇಲ್ಛಾವಣಿ ಹಾಗೂ ಆವರಣದಲ್ಲಿ ಸಿಸಿ ನಿರ್ಮಾಣ ಕಾರ್ಯ ನಡೆದಿರುವುದರಿಂದ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿರುವದು ಪ್ರಯಾಣಿಕರಲ್ಲಿ ಸಂಕಷ್ಟ ಉಂಟುಮಾಡಿದೆ.

ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ಬೇಜವಾಬ್ದಾರಿ ಮತ್ತು ಸಂಭಂದಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ಬಸ್ ನಿಲ್ದಾಣ, ನಿರ್ಮಾಣವಾಗಿ 15 ವರ್ಷ ಕಳೆದರೂ ಇನ್ನೂ ಪ್ರಯಾಣಿಕರ ಅನುಕೂಲಕ್ಕೆ ಸಮರ್ಪಣೆಯಾಗಿಲ್ಲ. ಕಳೆದ 8 ತಿಂಗಳ ಹಿಂದೆ ಪ್ರಾರಂಭವಾಗಿರುವ ಕಾಮಗಾರಿಯು ಇನ್ನೂ ಪೂರ್ಣಗೊಳ್ಳುವ ಯಾವುದೇ ನಿರೀಕ್ಷೆ ಕಾಣುತ್ತಿಲ್ಲ ಎಂದು ಗ್ರಾ.ಪಂ ಸದಸ್ಯ ತಿಪ್ಪಯ್ಯ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಮಹಿಳಾ ಶೌಚಾಲಯ ವ್ಯವಸ್ಥೆಯೇ ಇಲ್ಲ. ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಬಹಳಷ್ಟು ಪ್ರಯಾಣಿಕರು ನಿಲ್ದಾಣದ ಆವರಣದಲ್ಲಿಯೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ.ದುರ್ವಾಸನೆ ಹೆಚ್ಚಾಗಿದೆ. ಅಲ್ಲದೇ  ಮೇಲ್ವಿಚಾರಕರು ಇದ್ದರೂ ಸಹ ಖಾಸಗಿ ವಾಹನಗಳು ನಿಲ್ದಾಣದ ಒಳಗಡೆ ರಾಜಾರೋಷವಾಗಿ ಪ್ರವೇಶಿವುದಷ್ಟೇ, ಅಲ್ಲದೆ ಸರ್ಕಾರಿ ಬಸ್‌ಗಳ ಮುಂದೆಯೇ ಪ್ರಯಾಣಿಕರನ್ನು ಕರೆದೊಯ್ಯುವುದು ಸಾಮಾನ್ಯವಾಗಿದೆ ಎಂದು ಹೇಳಿದರು.

ಕಾಟಾಚಾರಕ್ಕೆ ಎಂಬಂತೆ ನಿಲ್ದಾಣದ ಪುನರ್ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲಾಖೆ ಅಧಿಕಾರಿಗಳು ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ಮಾಡಲಾಗುತ್ತಿದೆ. ಈಗ ಅದೂ ಕೂಡ ಸ್ಥಗಿತವಾಗಿರುವುದರಿಂದ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕೆ ಬರಲು ಇನ್ನೆಷ್ಟು ವರ್ಷ ಕಳೆಯುತ್ತೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕೂಡಲೇ ಜಿಲ್ಲಾ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.