ADVERTISEMENT

`ಕಾರ್ಮಿಕ ಮಾನ್ಯತೆ': ಬಿಸಿಯೂಟ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 9:54 IST
Last Updated 4 ಜೂನ್ 2013, 9:54 IST

ರಾಯಚೂರು: ಇಲ್ಲಿನ ಸರ್ಕಾರಿ ನೌಕರರ ಸಂಘದ ಮನೋರಂಜನಾ ಕೇಂದ್ರದಲ್ಲಿ ಸಿಐಟಿಯು ಸಂಘಟನೆ ವತಿಯಿಂದ ಸೋಮವಾರ ಬಿಸಿಯೂಟ ನೌಕರರ 3ನೇ ತಾಲ್ಲೂಕು ಸಮ್ಮೇಳನ  ಜರುಗಿತು.

ಸಮ್ಮೇಳನ ಉದ್ಘಾಟಿಸಿದ ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖ್ ಷಾ ಖಾದ್ರಿ ಮಾತನಾಡಿ, ದೆಹಲಿಯಲ್ಲಿ ಈಚೆಗೆ  ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ  ಭಾರತೀಯ ಕಾರ್ಮಿಕರ ಸಮ್ಮೇಳನ ನಡೆಯಿತು ಎಂದು ಹೇಳಿದರು.

ಬಿಸಿಯೂಟ ನೌಕರರರನ್ನು ಕಾರ್ಮಿಕರರೆಂದು ಪರಿಗಣಿಸಬೇಕು ಹಾಗೂ  ಕನಿಷ್ಠ ವೇತನ ನೀಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದನ್ನು ಜಾರಿಗೊಳಿಸಲು ಬೆಂಗಳೂರಿನಲ್ಲಿ ಜೂನ್ 14ರಂದು ನಡೆಯುವ  ಹೋರಾಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಮಾತನಾಡಿ, ಅತಿ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುವ ಸರ್ಕಾರದ ನೀತಿ ಖಂಡನೀಯ. 10ಸಾವಿರ ಕನಿಷ್ಠ ವೇತನ ಹಾಗೂ ಪಿಂಚಣಿ ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿ ಕೆ.ಜಿ ವೀರೇಶ ಮಾತನಾಡಿ, ಬೆಲೆ ಏರಿಕೆ ತಕ್ಕಂತೆ ವೇತನ ಹೆಚ್ಚಳ ಮಾಡಬೇಕು ಸರ್ಕಾರ ಕ್ರಮ ಕೈಗೊಳ್ಳಬೇಕು. ಬಿಸಿಯೂಟ ನೌಕರರ ನಡೆಸುವ ಹೋರಾಟಕ್ಕೆ  ಕರ್ನಾಟಕ ಪ್ರಾಂತ ರೈತ ಸಂಘವು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.

ಸಿಐಟಿಯು ಸಂಘಟನೆ ಕಾರ್ಯದರ್ಶಿ ವೈ.ಈರಣ್ಣ, ಬಿಸಿಯೂಟ ನೌಕರರ  ಪದಾಧಿಕಾರಿಗಳಾದ ಗೌರಮ್ಮ, ಅಕ್ಕಮ್ಮ, ಕಲ್ಯಾಣಿ ಸೇರಿದಂತೆ ಅನೇಕ ನೌಕರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.