ADVERTISEMENT

ಕಾಸಿಗಾಗಿ ಸುದ್ದಿ: ಪರಿಶೀಲನಾ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:23 IST
Last Updated 3 ಏಪ್ರಿಲ್ 2013, 6:23 IST

ರಾಯಚೂರು: ಕರ್ನಾಟಕ ವಿಧಾನಸಭಾ ಚುನಾವಣೆ-2013ರ ವಿವಿಧ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೀಡುವ ಜಾಹೀರಾತು ಪರಿಶೀಲನೆಗಾಗಿ ಹಾಗೂ ಮಾಧ್ಯಮಗಳಲ್ಲಿ ಕಾಸಿಗಾಗಿ ಪ್ರಕಟವಾಗುವ ಹಾಗೂ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದ ಸಮಿತಿ ರಚಿಸಲು ಚುನಾವಣಾ ಆಯೋಗ ಸೂಚಿಸಿದೆ.

ಈ ಸಮಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಉಪವಿಭಾಗ ದಂಡಾಧಿಕಾರಿ ಮಟ್ಟದ ಓರ್ವ ಅಧಿಕಾರಿ, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಅಧಿಕಾರಿ, ಭಾರತೀಯ ಪತ್ರಿಕಾ ಮಂಡಳಿ ಸೂಚಿಸುವ ಪತ್ರಕರ್ತ ಅಥವಾ ಸ್ವತಂತ್ರ ನಾಗರಿಕ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಇರುತ್ತಾರೆ ಎಂದು ತಿಳಿಸಲಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಮಟ್ಟದ ಅಧಿಕಾರಿಗಳೇ ಪರಿಶೀಲಿಸಿ ಅನುಮೋದನೆ ನೀಡಬಹುದಾಗಿದೆ. ಆದರೆ, ಕಾಸಿಗಾಗಿ ಸುದ್ದಿ ಪ್ರಕಟವಾಗುವ ಸಂದರ್ಭದಲ್ಲಿ ಸಮಿತಿಯ ಪೂರ್ಣ ಸದಸ್ಯರು ಪರಿಶೀಲಿಸಬೇಕಾಗಿದೆ.

ಸಮಿತಿಯು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೇಬಲ್ ನೆಟ್‌ವರ್ಕ್, ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್‌ಗಳು ಸೇರಿದಂತೆ ಎಲ್ಲ ಮಾಧ್ಯಮಗಳ ಮೇಲೆ ನಿಗಾ ಇಟ್ಟು  `ಕಾಸಿಗಾಗಿ ಸುದ್ದಿ' ಎಂದು ಅನುಮಾನಿಸಲಾದ ಸುದ್ದಿಗಳನ್ನು ಪರಿಶೀಲಿಸಬೇಕಾಗಿದೆ ಹಾಗೂ ಸಂಬಂಧಿಸಿದವರಿಗೆ ನೋಟೀಸ್ ನೀಡಿ ವಿವರಣೆ ಪಡೆಯಬೇಕಾಗುತ್ತದೆ ಎಂದು ವಿವರಿಸಲಾಗಿದೆ.

`ಕಾಸಿಗಾಗಿ ಸುದ್ದಿ' ಪ್ರಕಟವಾದ ಸಂದರ್ಭದಲ್ಲಿ ಅಭ್ಯರ್ಥಿಯು ಹಣ ಪಾವತಿಸಿರಲಿ ಅಥವಾ ಇಲ್ಲದಿರಲಿ, ವಾರ್ತಾ ಇಲಾಖೆ ನಿಗದಿಪಡಿಸಿದ ಜಾಹೀರಾತು ದರ ಇಲ್ಲವೇ ಆಯಾ ಮಾಧ್ಯಮಗಳ ವಾಸ್ತವ ಜಾಹೀರಾತು ದರವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿರುತ್ತದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಅನುಮೋದನೆ ಪಡೆಯಲಾಗಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಬೇಕಾಗಿರುತ್ತದೆ. ಇತರೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ಪರಿಶೀಲನಾ ದೃಷ್ಟಿಯಿಂದ ಸಲಹೆಯು ಗಮನಿಸಬೇಕಾಗುತ್ತದೆ.

ಅಭ್ಯರ್ಥಿಯ ಪರವಾಗಿ ಅಭ್ಯರ್ಥಿಯ ಒಪ್ಪಿಗೆ ಪಡೆದು ಅಥವಾ ಪಡೆಯದೆಯೂ ಪ್ರಕಟವಾಗುವ ಜಾಹೀರಾತುಗಳನ್ನು ಪರಿಶೀಲಿಸಿ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ಸಮಿತಿ ನೀಡಬೇಕಾಗಿದೆ. ಅಭ್ಯರ್ಥಿಯ ಒಪ್ಪಿಗೆಯಿಂದ ಪ್ರಕಟವಾಗುವ ಜಾಹೀರಾತುಗಳ ವೆಚ್ಚವನ್ನು ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಯ ಒಪ್ಪಿಗೆ ಇಲ್ಲದಿದ್ದಲ್ಲಿ ಜಾಹೀರಾತು ನೀಡಿದವರ ವಿರುದ್ಧ ಕ್ರಮ ವಹಿಸಲಾಗುತ್ತದೆ ಎಂದು ವಿವರಿಸಲಾಗಿದೆ.

ಇತರೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ಕರಪತ್ರ, ಪೋಸ್ಟರ್, ಮತ್ತಿತರ ಚುನಾವಣಾ ಸಾಮಗ್ರಿಯಲ್ಲಿ ಮುದ್ರಕರ ಮತ್ತು ಪ್ರಕಾಶಕರ ಹೆಸರು ನಮೂದಿಸುವುದು ಕಡ್ಡಾಯವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.