ADVERTISEMENT

ಕಿರುಕುಳ ಆರೋಪ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 8:35 IST
Last Updated 6 ಮಾರ್ಚ್ 2012, 8:35 IST

ಲಿಂಗಸುಗೂರ: ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಅನುಚಿತವಾಗಿ ವರ್ತಿಸುತ್ತ ಕಿರುಕುಳ ನೀಡುವುದು ಸೇರಿದಂತೆ ಇತರೆ ಸಮಸ್ಯೆಗಳಿಂದ ಮುಕ್ತಿಗೊಳಿಸುವಂತೆ ಆಗ್ರಹಿಸಿ ಸೋಮವಾರ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿ ಸಮೂಹ ಪ್ರತಿಭಟನಾ ರ‌್ಯಾಲಿ ನಡೆಸಿತು.

ಸೋಮವಾರ ದಿಢೀರ್ ಪ್ರತಿಭಟನಾ ರ‌್ಯಾಲಿ ನಡೆಸಿದ ವಿದ್ಯಾರ್ಥಿ ಸಮೂಹ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಾಚಾರ್ಯರ ವಿರುದ್ಧ ಧಿಕ್ಕಾರ ಹಾಕುತ್ತ, ಬಹಿರಂಗ ಕ್ಷಮಾರ್ಪಣೆಗೆ ಒತ್ತಾಯಿಸಿದರು.

ವಿವಿಧ ಬೇಡಿಕೆಗಳನ್ನೊಂಡ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತ ಟಿ. ಯೊಗೇಶ ಅವರ ಮೂಲಕ ಅರ್ಪಿಸುವ ಜೊತೆಗೆ ನ್ಯಾಯ ಒದಗಿಸುವಂತೆ ಆಗ್ರಹಪಡಿಸಿದರು.

ವಿದ್ಯಾರ್ಥಿಗಳ ವೈಯಕ್ತಿಕ ದಾಖಲೆಗಳನ್ನು  ನೀಡಲು ತೊಂದರೆ ನೀಡುತ್ತಿದ್ದಾರೆ. ಸಂಸ್ಥೆಗೆ ನಿಗದಿತವಾಗಿ ಬರುತ್ತಿಲ್ಲ. ಬೋಧಕ ಸಿಬ್ಬಂದಿ ಕೊರತೆ ನಿಭಾಯಿಸಬೇಕು.  ವಸತಿ ನಿಲಯದ ಸೌಲಭ್ಯ ಕಲ್ಪಿಸಬೇಕು. ಪ್ರಾಚಾರ್ಯರನ್ನು ಕೂಡಲೆ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ವಿವರಿಸಿದ್ದಾರೆ. ಇಲ್ಲವಾದಲ್ಲಿ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೋರಾಟದ ನೇತೃತ್ವವನ್ನು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಂಗನಾಥ, ಮುಖಂಡರಾದ ರಮೇಶ, ಮಹೇಶ, ಸಣ್ಣಯ್ಯ, ಬಂದೇನವಾಜ, ಸದ್ದಾಂ, ಬಸವರಾಜ, ಪ್ರಶಾಂತ, ಯಲ್ಲಪ್ಪ, ಭೀಮಣ್ಣ, ಶ್ರೀದೇವಿ, ನಾಗಲಿಂಗಮ್ಮ, ಜ್ಯೋತಿ, ಗೀತಾ, ರಾಜೇಶ್ವರಿ, ಮಹಾದೇವಪ್ಪ ವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.