ADVERTISEMENT

ಕುಡಿಯುವ ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 9:13 IST
Last Updated 20 ಅಕ್ಟೋಬರ್ 2017, 9:13 IST

ಹಟ್ಟಿ ಚಿನ್ನದ ಗಣಿ: ಸಮೀಪದ ಕೃಷ್ಣಾ ನದಿಯಿಂದ ಹಟ್ಟಿ, ಕೋಠಾ ಮತ್ತು ಗುರುಗುಂಟಾ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್‌ ಲೈನ್‌ ಮಳೆ ನೀರಿನ ರಭಸಕ್ಕೆ ಟಣಮಕಲ್‌ ಗ್ರಾಮದ ಹತ್ತಿರ ಕೊಚ್ಚಿ ಹೋಗಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

‘ಜಲ ನಿರ್ಮಲ ಯೋಜನೆಯಡಿ ಬಹು ಗ್ರಾಮಗಳ ಕುಡಿಯುವ ನೀರು ಯೋಜನೆ ಕೈಗೊಳ್ಳಲಾಯಿತು. ಆದರೆ ಈ ಯೋಜನೆಯಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಉಂಟಾಗುತ್ತಿವೆ. ಈಗಾಗಲೇ ವಿದ್ಯುತ್‌ ಕಡಿತದಿಂದ ಹಟ್ಟಿ ಗ್ರಾಮಕ್ಕೆ 10 ರಿಂದ 12 ದಿನಕ್ಕೆ ಒಂದು ಸಲ ನೀರು ಪೂರೈಕೆಯಾಗುತ್ತಿದೆ. ಈಗ ಪೈಪ್‌ ಒಡೆದಿದ್ದರಿಂದ ಕಳೆದ 15 ದಿನಗಳಿಂದ ಕುಡಿಯಲು ನೀರಿಲ್ಲ’ ಎಂದು ಜನರು ತಿಳಿಸಿದರು.

‘ಈ ಹಿಂದೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಕ್ಕದ ಹಟ್ಟಿ ಚಿನ್ನದ ಗಣಿ ಕ್ಯಾಂಪ್‌ನ ಮೇಲೆ ಅವಲಂಬಿತರಾಗಿದ್ದರು. ಅದೇ ಪರಸ್ಥಿತಿ ಮರುಕಳಿಸಿದೆ. ಹಟ್ಟಿ ಕ್ಯಾಂಪ್‌ನಲ್ಲಿರುವ ಸಾರ್ವಜನಿಕ ನಳಗಳಿಂದ ನೀರು ತುಂದುಕೊಳ್ಳುತ್ತಿದ್ದಾರೆ.

ADVERTISEMENT

ಕೊಡಗಳನ್ನು ಹಿಡಿದು ನೀರಿಗಾಗಿ ಅಲೆಯುವುದು ತಪ್ಪಿಲ್ಲ. ನೀರಿಗಾಗಿ ಬವಣೆ ತಪ್ಪಿಲ್ಲ. ಪರಿಸ್ಥತಿ ಹೀಗೆ ಮುಂದುವರೆದರೆ ಮುಂದೇನು ಗತಿ’ ಎಂದು ಗ್ರಾಮಸ್ಥರು ಅಹವಾಲು ತೋಡಿಕೊಂಡರು.

ಪೈಪ್‌ ಲೈನ್‌ ಶೀಘ್ರ ದುರಸ್ತಿ ಕೈಗೊಂಡು ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಮುಂದಾಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.