ADVERTISEMENT

ಕುಡಿಯುವ ನೀರಿನ ಕನಸು ಮರೀಚಿಕೆ !

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 6:35 IST
Last Updated 19 ಫೆಬ್ರುವರಿ 2012, 6:35 IST

ಲಿಂಗಸುಗೂರ(ಮಸ್ಕಿ): ತಾಲ್ಲೂಕಿನ ಮಸ್ಕಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಸಾಕಷ್ಟು ಯೋಜನೆ ಅಣಿಗೊಳಿಸಲಾಗಿದೆ. ಕೋಟ್ಯಂತರ ಹಣ ಖರ್ಚು ಮಾಡುತ್ತ ಬಂದಿದ್ದರು ಕೂಡ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ.
 

1970ರಲ್ಲಿ ಹಳ್ಳದಲ್ಲಿ ಟ್ಯಾಂಕ್‌ವೊಂದನ್ನು ನಿರ್ಮಿಸಿದ್ದು ಬಿಟ್ಟರೆ ಉಳಿದೆಲ್ಲಾ ಯೋಜನೆಗಳು ಹಳ್ಳ ಹಿಡಿದಿವೆ ಎಂಬ ನೋವಿನ ಮಾತು ಜನರಿಂದ ಕೇಳಿಬರುತ್ತವೆ.

ಮಸ್ಕಿ ಗ್ರಾಮವು ವಿಧಾನಸಭಾ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕೇಂದ್ರ ಸ್ಥಳವಾಗಿದೆ. ಗ್ರಾಮ ಪಂಚಾಯಿತಿ ಹೊಂದಿದ್ದು ತಾಲ್ಲೂಕು ಕೇಂದ್ರವನ್ನಾಗಿಸಲು ಏ ಹೋರಾಟ ಮಾಡಲಾಗಿದೆ. ಆಡಳಿತ ವ್ಯವಸ್ಥೆಯ ಕೇಂದ್ರ ಸ್ಥಳವಾಗಿದ್ದರು ಕೂಡಾ ಶಾಶ್ವತ ಕುಡಿಯುವ ನೀರು ಪೂರೈಸುವಲ್ಲಿ ರಾಜಕೀಯ ಮಾಡಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿ ಕೇಳಿಬರುತ್ತವೆ.  ಕೊಳವೆಬಾವಿಗಳಿಂದ ಪೂರೈಸುವ ನೀರು ಕೂಡ ಕಲುಷಿತಗೊಂಡಿರುತ್ತವೆ ಎಂಬ ಕೂಗು ಮಹಿಳೆಯರಿಂದ ತೆಲಿಬರುತ್ತಿವೆ.

ನಾಲ್ಕು ದಶಕಗಳ ಹಿಂದೆ ಅನುಷ್ಠಾನಗೊಂಡ ಯೋಜನೆಯ ಟ್ಯಾಂಕ್ ಮಸ್ಕಿ ಹಳ್ಳದಲ್ಲಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಕಲುಷಿತ ನೀರು ನೇರವಾಗಿ ಟ್ಯಾಂಕ್‌ಗೆ ಸೇರ್ಪಡೆಗೊಳ್ಳುತ್ತದೆ. ಚಳಿಗಾಲ, ಬೇಸಿಗೆ ಕಾಲದಲ್ಲಿ ಟ್ಯಾಂಕ್ ಸುತ್ತಮುತ್ತ  ಕಸಕಡ್ಡಿ ಬೆಳೆದು ದುರ್ನಾತ ಬೀರುವ ಗೊಜ್ಜು ಸಂಗ್ರಹಗೊಂಡಿರುತ್ತದೆ. ಅಕ್ಕ ಪಕ್ಕದ ವಾರ್ಡ್‌ನ ಮಹಿಳೆಯರ ಬಹಿರ್ದೆಷೆ ಸ್ಥಳವು ಇದಾಗಿದೆ ಎಂದು ಜಯಕರ್ನಾಟಕ ಸಂಘಟನೆ ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

ಮಸ್ಕಿ ಗ್ರಾಮಕ್ಕೆ ಭಾಗಶಃ ಶೇ. 80ರಷ್ಟು ಕುಡಿಯುವ ನೀರನ್ನು ತುಂಗಭದ್ರಾ ಎಡದಂಡೆ ನಾಲೆಯಿಂದ ಪೂರೈಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ ಕೊನೆ ಅಥವಾ ಏಪ್ರೀಲ್ ತಿಂಗಳವರೆಗೆ ನೀರು ಹರಿಸಲಾಗುತ್ತಿತ್ತು. ಈ ಬಾರಿ ತಿಂಗಳ ಮೊದಲೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಮಸ್ಕಿಯ 15 ವಾರ್ಡ್‌ಗಳ 30ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಯಾವ ಮೂಲದಿಂದ ನೀರು ಹರಿಸಬೇಕು ಎಂಬುದರ ಚಿಂತನೆ ನಡೆದಿಲ್ಲ. ಮುಂಜಾಗ್ರತ ನಿರ್ಣಯ ಕೈಗೊಳ್ಳದೆ ಹೋದಲ್ಲಿ ಮಸ್ಕಿ ನಾಗರಿಕರ ಕಣ್ಣಲ್ಲಿ ಕಣ್ಣೀರು ಹರಿಯುವುದು ನಿಶ್ಚಿತ ಎಂಬುದು ಹೆಸರು ಹೇಳದೆ ಅಧಿಕಾರಿ ಹೇಳಿದ್ದಾರೆ.

ಮಸ್ಕಿಗೆ ಈಗಾಗಲೆ ಅಶುದ್ಧ ಕುಡಿಯುವ ನೀರನ್ನೆ ಪೂರೈಸಲಾಗುತ್ತಿದೆ. ಆ ಪೈಕಿ ತುಂಗಭದ್ರ ಎಡದಂಡೆ ನಾಲೆಯಲ್ಲಿ 6 ಮೂಲ ಬಳಸಿಕೊಳ್ಳಲಾಗುತ್ತಿದೆ. ಇವುಗಳಿಂದ ಶೇ. 80ರಷ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ನಾಲೆಗೆ ನೀರು ಸ್ಥಗಿತಗೊಳಿಸಿದರೆ ಮುಂದೇನು? ಎಂಬುದು ಸವಾಲಾಗಿ ಪರಿಣಮಿಸಿದೆ. ಮಸ್ಕಿ ನಾಲಾದಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಹಳ್ಳದ ನಾಲ್ಕು ಶಾಲಾ ಬೋರವೆಲ್‌ಗಳ ಬಸಿನೀರು ಕೂಡ ಸ್ಥಗಿತಗೊಂಡಿದೆ.
 

ಹೀಗಾಗಿ ಅಲ್ಲಲ್ಲಿ ಅಲ್ಪಸ್ವಲ್ಪ ನೀರು ಒದಗಿಸುವ 10 ಕೊಳವೆಬಾವಿಗಳಲ್ಲಿ ಕೂಡ ನೀರಿನ ಅಭಾವ ಕಾಣಿಸಿಕೊಂಡಿದೆ ಎಂದು ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ಶಾಶ್ವತ ಕುಡಿಯುವ ನೀರಿನ ಯೋಜನೆ ವಷ ಕಳೆದರು ಕೂಡ ಬುನಾದಿ ಹಂತದಲ್ಲಿದೆ. ಇಷ್ಟೆಲ್ಲಾ ಸಮಸ್ಯೆ ಸುಳಿಯಲ್ಲಿ ಬಳಲುತ್ತಿರುವ ಪಟ್ಟಣದ ಜನತೆಗೆ ಬೇಸಿಗೆ ದಿನಗಳಲ್ಲಿ ಶುದ್ಧ ಕುಡಿಯುವ ನೀರು ತಂದುಕೊಡುವಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ ಯಾವ ಕ್ರಮಕ್ಕೆ ಮುಂದಾಗುತ್ತದೆ ಎಂದು ಕಾದುನೋಡಬೇಕು.ಬೇಸಿಗೆ ದಿನಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಮುಂಜಾಗ್ರತ ಕ್ರಮ ಕೈಗೊಳ್ಳದೆ ಹೋದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರ ಒಡೆಯರ್ ಎಚ್ಚರಿಕೆ ನೀಡಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.