ರಾಯಚೂರು: ಚಾಲುಕ್ಯ ಕರಿಯರ್ ಆಕಾಡೆಮಿಯವತಿಯಿಂದ ಕರ್ನಾಟಕ ಆಡಳಿತ ಸೇವೆ(ಕೆಎಎಸ್) ಪೂರ್ವಬಾವಿ ಪರೀಕ್ಷೆಯ ಸಿದ್ಧತೆ ಹಿನ್ನೆಲೆಯಲ್ಲಿ ನವೆಂಬರ್ 18ರಿಂದ ಎರಡು ತಿಂಗಳು ಉಚಿತ ತರಬೇತಿ ನೀಡಲಾಗುವುದು ಎಂದು ಚಾಲುಕ್ಯ ಆಕಾಡೆಮಿಯ ನಿರ್ದೇಶಕ ಸಂಗಮೇಶ ಮಂಗಾನವರ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷದಿಂದಲೂ ನಗರದಲ್ಲಿ ಉಚಿತ ತರಬೇತಿಯನ್ನು ಆಕಾಡೆಮಿಯಿಂದ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಉಚಿತ ತರಬೇತಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಚಾಲುಕ್ಯ ಆಕಾಡೆಮಿಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಟ್ಟಿದೆ. ಈ ಪ್ರದೇಶದ ವಿದ್ಯಾರ್ಥಿಗಳು ಬೇರೆ ಕಡೆಗೆ ಹೋಗಿ ತರಬೇತಿ ಪಡೆಯಲು ಸುಮಾರು 20ರಿಂದ 30 ಸಾವಿರ ರೂಪಾಯಿಗಳವರೆಗೆ ಹಣ ವೆಚ್ಚವಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇಷ್ಟೊಂದು ಹಣ ಭರಿಸಲು ಸಾಧ್ಯ ಆಗುವುದಿಲ್ಲ ಎಂದು ಹೇಳಿದರು.
ಹಣ ವೆಚ್ಚದ ಮಾಡಲು ಆಗದೇ ಬಡ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದ ಹಿನೆಲೆಯಲ್ಲಿ ಆಕಾಡೆಮಿ ಎರಡು ತಿಂಗಳ ಉಚಿತ ತರಬೇತಿ ನೀಡಲಾಗುವುದು. ಪ್ರತಿ ದಿನ 4ರಿಂದ 5 ಗಂಟೆಗಳವರೆಗೆ ತರಬೇತಿ ನಡೆಯಲಿದೆ ಎಂದು ತಿಳಿಸಿದರು.
ಪದವಿ ಉತ್ತೀರ್ಣರಾದ ಹಾಗೂ ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ತರಬೇತಿ ಪಡೆಯಬಹುದಾಗಿದೆ. ಈ ತರಬೇತಿಗೆ ರಾಜ್ಯದ ವಿವಿಧ ಭಾಗಗಳಿಂದ ಅನುಭವಿ ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.
ಎರಡು ಬ್ಯಾಚ್‌ಗಳನ್ನು ನಡೆಸಲಾಗುತ್ತಿದ್ದು, ಒಂದು ಬ್ಯಾಚ್‌ನಲ್ಲಿ 400 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿವರಿಸಿದರು. ಹೈದರಾಬಾದ್ ಕರ್ನಾಟಕ ಪ್ರದೇಶದ ಸ್ಪರ್ಧಾರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಇದೇ 18ರಂದು ತರಬೇತಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 98805-89551 ಅಥವಾ 99861-07089 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಮನವಿ ಮಾಡಿದರು. ಚಾಲುಕ್ಯ ಆಕಾಡೆಮಿಯ ಉಪನಿರ್ದೇಶಕರಾದ ಮಾಧವಿ ಎಸ್ ಮಂಗಾನವರ,ಸಂಪನ್ಮೂಲ ವ್ಯಕ್ತಿ ಪಾರ್ಶ್ವನಾಥ ಪಾಲಬಾವಿ. ಉಪನ್ಯಾಸಕ ವಿರುಪನಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.