ADVERTISEMENT

ಕೆರೆಯಲ್ಲೊಂದು ಸುತ್ತು; ದುರ್ನಾತದಿಂದ ಸುಸ್ತು

ನಾಗರಾಜ ಚಿನಗುಂಡಿ
Published 5 ಜೂನ್ 2017, 6:05 IST
Last Updated 5 ಜೂನ್ 2017, 6:05 IST
ಮಾವಿನಕೆರೆಯಲ್ಲಿ ತ್ಯಾಜ್ಯರಾಶಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ
ಮಾವಿನಕೆರೆಯಲ್ಲಿ ತ್ಯಾಜ್ಯರಾಶಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ   

ರಾಯಚೂರು: ನಗರದ ಮಾವಿನಕೆರೆ ದೂರದಿಂದ ಗಮನ ಸೆಳೆಯುತ್ತದೆ. ಆದರೆ ಕೆರೆದಂಡೆಯಲ್ಲಿ ಒಂದು ಸುತ್ತು ಹಾಕಲು ಉತ್ಸುಕತೆ ತೋರಿಸುವವರಿಗೆ ಅಲ್ಲಿನ ಪರಿಸರ ನಿರುತ್ಸಾಹ ಮೂಡಿಸುತ್ತಿದೆ.

ಕೆರೆಯ ಒಡಲಲ್ಲಿ ತುಂಬಿಕೊಂಡ ತ್ಯಾಜ್ಯರಾಶಿ ಮತ್ತು ಸತ್ತುಬಿದ್ದಿರುವ ಮೀನುಗಳು ದುರ್ನಾತ ಎಬ್ಬಿಸಿವೆ. ವಾಕರಿಕೆ ತರಿಸುವ ವಾತಾವರಣದಿಂದಾಗಿ ಕೆರೆಯ ಸೌಂದರ್ಯ ಸಂಪೂರ್ಣ ಹಾಳಾಗಿದೆ. ಮಾವಿನಕೆರೆ ಪಕ್ಕದ ಉದ್ಯಾನದಿಂದ ನಂದೇಶ್ವರ ದೇವಸ್ಥಾನ ಪಕ್ಕದಲ್ಲಿ ಕೆರೆಗೆ ಒಡ್ಡು ನಿರ್ಮಿಸಲಾಗಿದೆ. ಆದರೆ ಕೆರೆಯ ಸೌಂದರ್ಯೀಕರಣ ಸಮಗ್ರವಾಗಿ ಕೈಗೊಂಡಿಲ್ಲ.

ಮಂತ್ರಾಲಯ ರಸ್ತೆ ಭಾಗದಲ್ಲಿರುವ ಕೆರೆಯ ನೀರು ಚರಂಡಿಗಿಂತ ಭಿನ್ನವಾಗಿಲ್ಲ. ಚರಂಡಿಗಳ ಮಲೀನ ನೇರ ಕೆರೆಗೆ ಸೇರುತ್ತಿದೆ. ಅದೇ ಮಲೀನ ವಾತಾವರಣವು ಸೊಳ್ಳೆಗಳ ಉತ್ಪತ್ತಿಯ ತಾಣವೂ ಆಗಿದೆ. ಇದರಿಂದಾಗಿ ಕೆರೆಯ ಅಕ್ಕಪಕ್ಕದಲ್ಲಿರುವ ಜನವಸತಿಗಳಿಗೆ ಕೆರೆಯು ಶಾಪವಾಗಿ ಪರಿಣಮಿಸಿದೆ. ಪಕ್ಕದ ಬಡಾವಣೆಯ ಜನರಿಗೆ ಕೆರೆಯು ಆಹ್ಲಾದಕರ ವಾತಾವರಣ ನಿರ್ಮಿಸುವ ಬದಲು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

ADVERTISEMENT

‘ಕಲಬುರ್ಗಿಯಲ್ಲಿರುವ ಶರಣ ಬಸವೇಶ್ವರ ಕೆರೆ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ನಗರಸಭೆ ಯೋಜಿಸಿದ್ದರು. ಆದರೆ ಇಲ್ಲಿಯವರೆಗೂ ಕನಿಷ್ಠ ಮಳೆನೀರು ವರ್ಷಪೂರ್ತಿ ಹಾಳಾಗದಂತೆ ಕಾಪಾಡಿಕೊಳ್ಳುವ ಕೆಲಸ ಕೂಡಾ ಆಗುತ್ತಿಲ್ಲ. ಚರಂಡಿಗಳಿಂದ ಮಲೀನ ಯತ್ತೇಚ್ಚವಾಗಿ ಕರೆಗೆ ಸೇರುತ್ತಿದೆ.

ಕೆರೆ ಉಳಿಸಿಕೊಳ್ಳಬೇಕು ಎಂದು ಸರ್ಕಾರ ಪ್ರತಿದಿನ ಹೇಳುತ್ತಿದೆ. ಆದರೆ ರಾಯಚೂರಿನಲ್ಲಿ ಮಾತ್ರ ಕೆರೆ ಉಳಿಸಿಕೊಂಡು ಅಭಿವೃದ್ಧಿ ಮಾಡುವುದಕ್ಕೆ ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ’ ಎಂದು ಕಾಲೇಜಿನ ಉಪನ್ಯಾಸಕ ಧರ್ಮೇಂದ್ರ ಎಸ್. ಹೇಳುವ ಮಾತಿದು.

ಕಾಮಗಾರಿ ಪ್ರಗತಿಯಲ್ಲಿದೆ
ಏಷ್ಯಯನ್ ಡೆವಲಪಮೆಂಟ್ ಬ್ಯಾಂಕ್ (ಎಡಿಬಿ) ನೆರವಿನಿಂದ ₹2.1 ಕೋಟಿ ಅನುದಾನ ಬಂದಿದೆ. ನಂದಿಶ್ವರ ದೇವಸ್ಥಾನದಿಂದ ಮಂತ್ರಾಲಯ ರಸ್ತೆವರೆಗಿನ 2.5 ಕಿಲೋ ಮೀಟರ್ ಕೆರೆದಂಡೆಯಲ್ಲಿ ಪಾದಚಾರಿ ಮಾರ್ಗ, ಚರಂಡಿ ಹಾಗೂ ಮಳೆನೀರು ಹರಿದುಹೋಗುವುದಕ್ಕೆ ಕಾಮಗಾರಿಗಳು ನಡೆಯುತ್ತಿವೆ.

ಮಾವಿನಕೆರೆಗೆ ಚರಂಡಿ ನೀರು ಸೇರಿ ಅದು ಮಲೀನವಾಗಿದೆ. ಅದನ್ನು ತಪ್ಪಿಸಲು ಚರಂಡಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಕೆರೆ ಅಭಿವೃದ್ಧಿ ನೋಟ
2.1 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ

ಪೂರಕವಾಗಿಲ್ಲ ಕರೆ ಬಳಿ ನಿರ್ಮಿಸಿರುವ ಉದ್ಯಾನದ ಸೌಂದರ್ಯಕ್ಕೆ ತಕ್ಕಂತೆ ಕೆರೆಯ ಸೌಂದರ್ಯೀಕರಣವಾಗುತ್ತಿಲ್ಲ.

2.5ಕಿ.ಮೀ ಕೆರೆ ದಂಡೆಗೆ ಚರಂಡಿ, ಪಾದಚಾರಿ ಮಾರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.