ADVERTISEMENT

ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 5:35 IST
Last Updated 11 ಅಕ್ಟೋಬರ್ 2012, 5:35 IST

ಲಿಂಗಸುಗೂರ(ಮುದಗಲ್ಲ): ಕಳೆದ ನಾಲ್ಕಾರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಷ್ಟೊಂದು ಸಂಕಷ್ಟಗಳ ಮಧ್ಯೆ ಕೊಳವೆಬಾವಿ ಅಥವಾ ತೆರೆದ ಬಾವಿ ನೀರು ಬಳಸುವ ರೈತರು ಸ್ವಲ್ಪ ಮಟ್ಟಿನ ಚೇತರಿಕೆ ಬದುಕು ಕಂಡುಕೊಂಡಿದ್ದಾರೆ. ಅಂತಹ ರೈತರಿಗೂ ಕೂಡ ಪ್ರಸಕ್ತ ಸಾಲಿನಲ್ಲಿ ಟೊಮ್ಯಾಟೊ ಕಾಯಿಗೆ ಕಪ್ಪುಚುಕ್ಕಿ ರೋಗ ಕಾಣಿಸಿಕೊಂಡು ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ ಎನ್ನುವಂತಹ ಸ್ಥತಿ ನಿರ್ಮಾಣಗೊಂಡಿದೆ.

ತಾಲ್ಲೂಕಿನ ಬಗಡಿತಾಂಡಾದ ರೈತ ಭೋಜಪ್ಪ ಜಾದವ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ನಾಟಿ ಮಾಡಿಕೊಂಡಿದ್ದರು. ಆರಂಭದಲ್ಲಿ ಉತ್ತಮ ಬೆಳೆ ಬಂದಿದ್ದು, ಕಾಯಿ ಕಟ್ಟುವಾಗ ಕಾಪು ಉದುರುವುದು, ಕಾಯಿಗಳ ಮೇಲೆ ಕಪ್ಪುಚುಕ್ಕೆ ಕಾಣಿಸಿಕೊಂಡು ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದಂತಾಗಿದೆ.

ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹಾಗೂ ಉತ್ತಮ ಬೆಲೆ ದೊರೆಯುತ್ತಿದ್ದರು ಕೂಡ ರೈತ ಕುಟುಂಬಕ್ಕೆ ಕಪ್ಪುಚುಕ್ಕೆ ರೋಗ ಶಾಪವಾಗಿ ಪರಿಣಮಿಸಿದೆ.

ಖಾಸಗಿ ಅಂಗಡಿಯಿಂದ ರೂ. 250ರಂತೆ ಮಹಾಲಕ್ಷ್ಮಿ ತಳಿಯ ಒಟ್ಟು 16 ಪ್ಯಾಕೆಟ್ ಬೀಜ ನಾಟಿ ಮಾಡಲಾಗಿತ್ತು. ಕಳೆದ 15 ವರ್ಷಗಳಿಂದ ಟೊಮ್ಯಾಟೊ ಬೆಳೆ ಬೆಳೆಯುತ್ತ ಬಂದಿರುವ ತಮ್ಮ ಕುಟುಂಬ ಪ್ರಸಕ್ತ ವರ್ಷ ಭಾರಿ ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ರೂ. 8-9 ಬೆಲೆ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳೆ ಕೈಕೊಟ್ಟಿರುವುದು ನುಂಗದ ತುತ್ತಾಗಿ ಪರಿಣಮಿಸಿದೆ. ಏನೆಲ್ಲಾ ಕ್ರಿಮಿನಾಶಕ ಬಳಸಿದರು ಕೂಡ
ನಿಯಂತ್ರಣವಾಗದೆ ನಷ್ಟಕ್ಕೊಳಗಾಗಿದ್ದೇವೆ ಎಂದು ಭೋಜಪ್ಪ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ತೋಟಗಾರಿಕೆ ಸಹಾಯ ನಿರ್ದೇಶಕ ಚಂದ್ರಶೇಖರಗೌಡ ಅವರನ್ನು ಸಂಪರ್ಕಿಸಲಾಗಿ, ಬಗಡಿತಾಂಡಾದ ರೈತ ಜಮೀನಿನಲ್ಲಿ ಟೊಮ್ಯಾಟೊ ಕಾಯಿಗೆ ಕಪ್ಪುಚುಕ್ಕಿ ರೋಗ ಕಾಣಿಸಿಕೊಂಡಿದ್ದು ನಿಜ. ಇದು ಯಾವುದೇ ಕೀಟ ಬಾಧೆಯಿಂದ ಬಂದಿರುವುದಲ್ಲ. ಬೀಜದ ದೋಷದಿಂದಲೆ ಕಪ್ಪುಚುಕ್ಕಿ ರೋಗ ಕಾಣಿಸಿಕೊಂಡಿದ್ದು ಯಾವುದೇ ಔಷದೋಪಚಾರ ಮಾಡಿದರು ನಿಯಂತ್ರಣ ಅಸಾಧ್ಯ. ಇಂತಹ ಪ್ರಸಂಗ ಅಪರೂಪಕ್ಕೊಂದು ವರದಿಯಾಗುತ್ತವೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.