ADVERTISEMENT

ಕೊಳಚೆಯಾದ ಕುಡಿವ ನೀರಿನ ಕೆರೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 8:45 IST
Last Updated 4 ಮಾರ್ಚ್ 2011, 8:45 IST

ಲಿಂಗಸುಗೂರ: ಸ್ಥಳೀಯ ಪುರಸಭೆ ವ್ಯಾಪ್ತಿಯ ನಾಗರಿಕರಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೋಟ್ಯಂತರ ಹಣ ಖರ್ಚು ಮಾಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಆದರೆ, ಆರಂಭಿಕ ಹಂತ ದಲ್ಲಿಯೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಕೊರತೆಯಿಂದ ನೀರು ಸಂಗ್ರಹಣಾ ಕೆರೆ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿರುವುದು ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ತಾಲ್ಲೂಕಿನ ಕೆಲ ಪ್ರಗತಿ ಪರ ಸಂಘಟನೆಗಳ ನಿರಂತರ ಹೋರಾಟದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರಾ ಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಯೋಜನೆ ಅನುಷ್ಠಾಗೊಳ್ಳುವಾಗ ಚುನಾಯಿತ ಪ್ರತಿನಿಧಿಗಳಲ್ಲಿ ಕಾಣಿಸಿಕೊಂಡ ಉತ್ಸಾಹ ನಂತರದ ದಿನಗಳಲ್ಲಿ ಕಾಣಸಿಗಲಿಲ್ಲ. ಯಾರದ್ದೊ ಗಂಟು ಯಲ್ಲಮ್ಮನ ಜಾತ್ರೆ ಎಂಬಂತೆ ಕಾಮಗಾರಿ ಮುಗಿಯಿತು ತಮ್ಮ ಕೆಲಸ ಮುಗಿತು ಎಂದು ಕೈತೊಳೆದು ಕೊಂಡಿರುವುದು ಈ ದುರಂತಕ್ಕೆ ಕಾರಣ ಎಂಬ ಆರೋಪಗಳು ಸಾಮಾನ್ಯವಾಗಿವೆ.

ಹತ್ತು ವರ್ಷಗಳ ಹಿಂದೆ ನಿರ್ಮಾಣ ಗೊಂಡಿರುವ ನೀರು ಸಂಗ್ರಹಣಾ ಕೆರೆ ಆರಂಭದಲ್ಲಿಯೆ ಸೋರಿಕೆಯ ಶಾಪಕ್ಕೆ ತುತ್ತಾಯಿತು. ಸೋರಿಕೆ ನಿಯಂತ್ರಣಕ್ಕೆ ಮುಂದಾಗದೆ, ಸೋರಿಕೆ ಆಗುವ ನೀರನ್ನು ಪುನಃ ಕೆರೆಗೆ ಎತ್ತಿ ಹಾಕಲು ಲಕ್ಷಾಂತರ ಹಣ ಖರ್ಚು ಮಾಡಿ ಪಂಪ್ ಅಳವಡಿಸಲಾಗಿತ್ತು. ಈಗ ಆ ಪಂಪ್‌ಗಳು ನಾಪತ್ತೆಯಾಗಿವೆ. ನಿರಂತರ ಸೋರಿಕೆಯಿಂದ ಕೆರೆಯ ಸುತ್ತ ಮುತ್ತಲಿನ ಪ್ರದೇಶ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿರುವ ಬಗ್ಗೆ ವಿವಿಧ ಸಂಘ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿವೆ.

ವಿಶಾಲವಾದ ಕೆರೆಯ ಮಣ್ಣಿನ ಏರಿಯ ವೀಕ್ಷಣಾ ರಸ್ತೆ ಮುಳ್ಳುಕಂಟಿಯಿಂದ ಮುಚ್ಚಿ ಹೋಗಿದೆ. ಮಣ್ಣಿನ ಏರಿಯ ತುಂಬೆಲ್ಲಾ ಮುಳ್ಳುಕಂಟಿ ಬೆಳೆದು ಅಪಾಯದ ಮುನ್ಸೂ ಚನೆ ನೀಡುತ್ತಿವೆ. ಕೆರೆಯ ಅಂಗಳದಲ್ಲಿ ಕಸಕಡ್ಡಿ ಬೆಳೆದು ನಿಂತು ನೀರು ಮಲಿನಗೊಂಡಿದೆ. ಜಾನುವಾರುಗಳು ಕೆರೆ ಅಂಗಳದಲ್ಲಿ ಈಜಾಡುವುದು ಸಾಮಾನ್ಯವಾಗಿದೆ. ವಿದ್ಯುತ್ ಪರಿವರ್ತಕ ಕೂಡ ಜಲಾವೃತಗೊಂಡಿದ್ದು ಮುಳ್ಳುಕಂಟಿಯಲ್ಲಿ ಮುಚ್ಚಿರುವ ಬಗ್ಗೆ ಜೆಸ್ಕಾಂ ಅಧಿಕಾರಿಗಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆರೆ ಸಂಪರ್ಕ ರಸ್ತೆ ಬಹುತೇಕ ಕಡೆಗಳಲ್ಲಿ ಜಲಾವೃತಗೊಂಡಿದೆ. ಸೆತುವೆಗಳು ಕುಸಿತ ಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ನೀರು ಶುದ್ಧೀಕರಣ ಘಟಕದಲ್ಲಿ ಕೂಡ ಲೋಪ ಕಾಣಿಸಿಕೊಂಡು ನೀರು ಶುದ್ಧೀಕರಣ ಗೊಳ್ಳುತ್ತಿಲ್ಲ. ಟ್ಯಾಂಕ್‌ಗಳಿಗೆ ನೀರು ಪೂರೈಸುವ ರೇಸಿಂಗ್ ಪೈಪ್ ಮತ್ತು ಪಟ್ಟಣದಲ್ಲಿನ ಪೈಪ್‌ಲೈನ್‌ಗಳು ಎಲ್ಲೆಂದರೆಲ್ಲಿ ಸೋರಿಕೆ ಕಾಣಿಸಿಕೊಂಡಿವೆ.

ದುರಸ್ತಿ ಕಾಣದೆ ಸೋರಿಕೆ ಸ್ಥಳದಲ್ಲಿ ಕೊಳಚೆ ಸಂಗ್ರಹಗೊಂಡು ಅದೇ ನೀರು ಮನೆಗಳಿಗೆ ಪೂರೈಕೆ ಆಗುತ್ತಿರುವ ಬಗ್ಗೆ ಮಹೇಶ ಶಾಸ್ತ್ರಿ ಆರೋಪಿಸಿದ್ದಾರೆ.ಕುಡಿಯುವ ನೀರು ಪೂರೈಕೆ ಮತ್ತು ನಿರ್ವಹಣೆ ಹೆಸರಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಹಣ ಖರ್ಚು ಹಾಕಲಾಗುತ್ತಿದೆ. ಆದಾಗ್ಯೂ ಕೂಡ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ನೀರು ಪೂರೈಕೆ ಹೆಸರಿನಲ್ಲಿ ಹಗಲು ದರೋಡೆ ನಡೆದಿದೆ. ಕರಡಕಲ್ಲ ಮತ್ತು ಕಸಬಾಲಿಂಗಸುಗೂರಗಳಲ್ಲಿ ನಿತ್ಯ ನೀರು ಬಿಡಲಾಗುತ್ತಿದೆ. ಪಟ್ಟಣದಲ್ಲಿ ಮಾತ್ರ ಎರಡು ದಿನಕ್ಕೊಮ್ಮೆ ಅಥವಾ ಮನಸೋ ಇಚ್ಛೆ ನೀರು ಬಿಡುತ್ತಿರುವುದರಿಂದ ಸಮಸ್ಯೆ ಎದುರಿಸು ವಂತಾಗಿದೆ ಎಂದು ಅಮರೇಶ, ಶಿವಕುಮಾರ, ನಾಗರಾಜ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.