ADVERTISEMENT

ಖಾತರಿ ಯೋಜನೆ ಕಾಮಗಾರಿಗಳ ತನಿಖೆಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 6:20 IST
Last Updated 1 ಆಗಸ್ಟ್ 2012, 6:20 IST

ಮಾನ್ವಿ: ತಾಲ್ಲೂಕಿನ ಕೆ.ಗುಡದಿನ್ನಿ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಲಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ತನಿಖೆಗೆ ಒತ್ತಾಯಿಸಿ ಕರ್ನಾಟಕ ಜನಜಾಗೃತಿ ಸಮಿತಿಯ ಗ್ರಾಮ ಘಟಕದ ಪದಾಧಿಕಾರಿಗಳು ಸೋಮವಾರ ಗ್ರಾಪಂ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

2010-11 ಮತ್ತು 2011-12ನೇ ಸಾಲಿನಲ್ಲಿ ಕೆ.ಗುಡದಿನ್ನಿ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಲಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಎಲ್ಲಾ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ. ಸಂಬಂಧಪಟ್ಟ ಎಂಜಿನಿಯರ್‌ಗಳು, ಅಧಿಕಾರಿಗಳು  ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸದೆ ಬಿಲ್‌ಗಳನ್ನು ಪಾವತಿ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ. ಕಾಮಗಾರಿಗಳ ಕುರಿತು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೇಳಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎನ್.ಮೂಸಾ ಯಾವುದೇ ಮಾಹಿತಿ ನೀಡುತ್ತಿಲ್ಲ. ಕರವಸೂಲಿಗಾರನಿಂದ ಮಾಹಿತಿ ಕೇಳಿದವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಕಾರಣ ಪಂಚಾಯಿತಿಯ ಎಲ್ಲಾ ಕಾಮಗಾರಿಗಳ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು. ಜಾಬ್ ಕಾರ್ಡ್ ಇಲ್ಲದ ಕೂಲಿಕಾರರಿಗೆ ಜಾಬ್‌ಕಾರ್ಡ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿಗಳನ್ನು ವಿತರಿಸಬೇಕು. ಗ್ರಾಮದ ಅಂಗನವಾಡಿ ಕಟ್ಟಡಗಳ ದುರಸ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ ನಿರತರು ಒತ್ತಾಯಿಸಿದರು.

ಕರ್ನಾಟಕ ಜನಜಾಗೃತಿ ಸಮಿತಿಯ ಗ್ರಾಮ ಘಟಕದ ಅಧ್ಯಕ್ಷ ಹನುಮಂತ ಆದೋನಿ, ಗೌರವಾಧ್ಯಕ್ಷ ಕೃಷ್ಣಪ್ಪ ವೈ, ಕಾರ್ಯಾಧ್ಯಕ್ಷ ಹನುಮಂತ ಮಾನ್ವಿ, ಪದಾಧಿಕಾರಿಗಳಾದ ಮರಿಯಪ್ಪ, ಕೃಷ್ಣಪ್ಪ ಮಾನ್ವಿ, ಅಮರೇಶ ಕಾವಲಿ, ಮೌನೇಶ ತಡಕಲ್, ಮುದುಕಪ್ಪ ಪೂಜಾರಿ, ಲಚುಮಣ್ಣ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.