ಲಿಂಗಸುಗೂರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಿಂಧನೂರು ತಾಲ್ಲೂಕಿನ ಸಾಲಗುಂದ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾಲಗುಂದ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಉದ್ಯೋಗ ಖಾತರಿ ಯೋಜನೆ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ತಂಡಕ್ಕೆ ದೂರು ನೀಡಿದ ಪ್ರಸಂಗ ಜರುಗಿತು.
ಸಾಲಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆ ಎಲ್ಲಾ ಕಾಮಗಾರಿಗಳು ಕೂಲಿಕಾರರಿಗೆ ಅಥವಾ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಕಿರಿಯ ಎಂಜಿನಿಯರ್ ಅವರುಗಳ ಕೃಪಕಟಾಕ್ಷದಂತೆ ಹಣ ಲೂಟಿ ಮಾಡಲಾಗುತ್ತಿದೆ. ಕೂಲಿಕಾರರು ಮತ್ತು ಉಳಿದ ಸದಸ್ಯರ ಆರೋಪಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
2010-11ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸುವಲ್ಲಿ ಕೂಲಿಕಾರರ ಬೇಡಿಕೆ ಆಧರಿಸಿ ಸಿದ್ಧಪಡಿಸಿಲ್ಲ. ಕ್ರಿಯಾಯೋಜನೆಯಲ್ಲಿ ಕೆಲ ಪ್ರತಿಷ್ಠಿತರಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭಾಗಶಃ ಕಾಮಗಾರಿ ಕೈಗೆತ್ತಿಕೊಳ್ಳದೆ ಎಂಐಎಸ್ ಅಳವಡಿಸಲಾಗಿದೆ. ಇತರೆ ಕೆಲ ಕಾಮಗಾರಿಗಳನ್ನು ಮಾಡದೆ ಬೋಗಸ್ ಬಿಲ್ ಪಾವತಿಗೆ ಮುಂದಾಗಿದ್ದಾರೆ. ಈ ಕುರಿತು ಈಗಾಗಲೆ ಸಾಕಷ್ಟು ದೂರು ನೀಡಲಾಗಿದೆ ಎಂದು ದೂರಿದರು.
ಸಿಂಧನೂರು ತಾಪಂ ಇಒಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೂರಕ್ಕೂ ಹೆಚ್ಚು ಸಲ ಖುದ್ದಾಗಿ ಗ್ರಾಮ ಪಂಚಾಯಿತಿ ಸದಸ್ಯರೆ ದೂರು ಸಲ್ಲಿಸಿದ್ದೇವೆ. ಹಲವಾರು ಬಾರಿ ದೂರು ಸಲ್ಲಿಸಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೇಂದ್ರ ತಂಡ ಸೋಮವಾರ ಸಿಂಧನೂರಿಗೆ ಆಗಮಿಸಿದಾಗ ಭೇಟಿ ನೀಡಿಸುವ ಭರವಸೆ ನೀಡಿ ಅಧಿಕಾರಿಗಳು ತಮಗೆ ವಂಚಿಸಿದ್ದಾರೆ ಎಂದು ನೇರ ಆರೋಪ ಮಾಡಿದರು.
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ತಾವುಗಳು ವಿಶ್ವಾಸ ಕಳೆದುಕೊಂಡಿದ್ದೇವೆ. ಹಲವು ಬಾರಿ ದೂರು ನೀಡಿದ್ದರೂ ಪುನಃ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಾರಣ ಈ ಪ್ರಕರಣಕ್ಕೆ ಸಂಬಂಧಿಸಿ ಸ್ವತಃ ರಾಜ್ಯ ಮತ್ತು ಕೇಂದ್ರ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಪ್ಪತಸ್ಥ ಹಾಗೂ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಕೊಳ್ಳುವಂತೆ ಸದಸ್ಯರ ನೇತೃತ್ವದ ತಂಡ ಕೇಂದ್ರ ತಂಡದ ಮುಖ್ಯಸ್ಥ ಎಸ್.ಕೆ ದೊಡೆಜ ಅವರಲ್ಲಿ ಭಿನ್ನವಿಸಿಕೊಂಡಿಡರು.
ಈ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯ ರಾಜ್ಯ ತಂಡದ ಸುರೇಶ ಬೆಂಗಳೂರು, ರಾಯಚೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ, ಉಪ ಕಾರ್ಯದರ್ಶಿ ಮಹ್ಮದ ಯುಸೂಫ್, ನೋಡಲ್ ಅಧಿಕಾರಿ ಸೋಮಸುಂದರ್ ಮತ್ತಿತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.