ADVERTISEMENT

ಜಲನಿರ್ಮಲ ಯೋಜನೆಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:25 IST
Last Updated 18 ಫೆಬ್ರುವರಿ 2012, 10:25 IST

ಸಿಂಧನೂರು: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಲನಿರ್ಮಲ ಯೋಜನೆಯಡಿ 13 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಹಲವು ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ತಾಲ್ಲೂಕಿನ ಬಂಗಾರಿಕ್ಯಾಂಪ್ ಮತ್ತು ವೆಂಕಟಗಿರಿಕ್ಯಾಂಪ್‌ನಲ್ಲಿ ಜಲನಿರ್ಮಲ ಯೋಜನೆಯ 75 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಲನಿರ್ಮಲ ಯೋಜನೆಯಲ್ಲಿ ಓವರ್‌ಹೆಡ್ ಟ್ಯಾಂಕ್ ಶುದ್ಧೀಕರಣ ಘಟಕ, ಪೈಪ್‌ಲೈನ್ ಕಾಮಗಾರಿ ನಿರ್ವಹಿಸಿ ಮನೆ-ಮನೆಗೆ ನೀರು ಪೂರೈಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.

ಈಗಾಗಲೇ ಶಾಂತಿನಗರ, ಭೀಮರಾಜ್‌ಕ್ಯಾಂಪ್, ಗೊರೇಬಾಳ ಕ್ಯಾಂಪ್, ಜಂಗಮರಹಟ್ಟಿ, ಸೋಮಲಾಪುರ, ಗೊಬ್ಬರಕಲ್, ದಢೇಸುಗೂರು, ಉಪ್ಪಳ ಮತ್ತಿತರ ಕಡೆಗಳಲ್ಲಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆದಿವೆ. ಹಲವಾರು ಗ್ರಾಮಗಳಲ್ಲಿ ಸಿ.ಸಿ.ರಸ್ತೆ ಕಾಮಗಾರಿಗಳನ್ನು ಕೈಗೊಂಡಿದ್ದು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹಣ ವಾಪಸ್ಸಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಲನಿರ್ಮಲ ಯೋಜನೆಯ ತಾಂತ್ರಿಕ ಸಹಾಯಕ ನಿರ್ದೇಶಕ ಎಸ್.ಕೆ.ಲಾಲಗೋಳ, ವೆಂಕಟಗಿರಿ ಕ್ಯಾಂಪಿನ ಸಿದ್ದರಾಮ ಶರಣರು, ಕಾಂಗ್ರೆಸ್ ಮುಖಂಡ ಭೀಮನಗೌಡ ಗೊರೇಬಾಳ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ.ಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಭೂಪಾಲ ನಾಡಗೌಡ, ರೌಡಕುಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಗಂಗಾಧರಗೌಡ, ಸದಸ್ಯರಾದ ತುಳಸಿ ರಂಗಪ್ರಸಾದ, ಶಶಿಕಲಾ ವೀರೇಶಗೌಡ, ಅಕ್ಷರ ದಾಸೋಹ ಅಧಿಕಾರಿ ರವಿಯಪ್ಪ, ನಾಗೇಶ ಹಂಚಿನಾಳ ಕ್ಯಾಂಪ್, ಗಿಲಾನಿಪಾಷ ವಕೀಲರು, ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಷ, ಜಾವೇದ್‌ಹುಸೇನ ದೇಸಾಯಿ ವಕೀಲ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.