ಲಿಂಗಸುಗೂರು: ಪ್ರಸಕ್ತ ಮಾರ್ಚ್ 16ರಂದು ನಡೆಯುವ ತಾಲ್ಲೂಕಿನ ಗುರುಗುಂಟಾ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿನ ಜಾನುವಾರು ಜಾತ್ರೆ ರದ್ದುಪಡಿಸುವುದನ್ನು ವಿರೋಧಿಸಿ ಮಂಗಳವಾರ ಆಯೋಜಿಸಿದ್ದ ವಿವಿಧ ಹರಾಜು ಪ್ರಕ್ರಿಯೆ ಬಹಿಷ್ಕರಿಸಿ ವರ್ತಕರು, ರೈತರು, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಹರಾಜು ಪ್ರಕ್ರಿಯೆಯನ್ನು ತಹಶೀಲ್ದಾರ ಜಿ.ಎಸ್. ಮಹಾಜನ ಆರಂಭಿಸುತ್ತಿದ್ದಂತೆ ಜಾನುವಾರು ಜಾತ್ರೆ ರದ್ದುಪಡಿಸುತ್ತಿರುವ ವದಂತಿ ಬಗ್ಗೆ ನಾಟಕ ಕಂಪೆನಿ, ಕಾಯಿ ಹರಾಜು, ವಾಹನಗಳ ಪಾರ್ಕಿಂಗ್ ಏಜೆನ್ಸಿಯವರು ಪ್ರಶ್ನಿಸುತ್ತಿದ್ದಂತೆ ಗೊಂದಲವುಂಟಾಗಿ ವಾಗ್ವಾದ ನಡೆದು ಬಹಿಷ್ಕಾರ ಹಾಕಲು ತೀರ್ಮಾನಿಸಲಾಯಿತು.
ಗುರುಗುಂಟಾ ಅಮರೇಶ್ವರ ಜಾತ್ರೆ ಉತ್ತರ ಕರ್ನಾಟಕದಲ್ಲಿಯೇ ಜಾನುವಾರು (ರೈತರ) ಜಾತ್ರೆ ಎಂದು ಹೆಸರು ಪಡೆದುಕೊಂಡಿದೆ. ಅಂತಹ ಜಾನುವಾರು ಜಾತ್ರೆ ರದ್ದು ಮಾಡುವುದಾದರೆ, ಸಾಂಪ್ರದಾಯಿಕ ಆಚರಣೆಗಳಿಗೆ ಅಪಚಾರ ಮಾಡಿದಂತೆ ಆಗುತ್ತದೆ. ಜಾನುವಾರು ಬಾರದೆ ಹೋದಲ್ಲಿ ಜಾತ್ರೆಗೆ ರೈತರು ಬರುವುದಿಲ್ಲ ಎಂದು ವಾಗ್ವಾದ ನಡೆಸಿ ಸಭೆ ಬಹಿಷ್ಕರಿಸಲಾಯಿತು.
ಜಾನುವಾರು ಜಾತ್ರೆಗೆ ಅನುಮತಿ ನೀಡುವುದಾದರೆ ತೆಂಗಿನಕಾಯಿ ಸಗಟು ವ್ಯಾಪಾರ, ತೆಂಗಿನಕಾಯಿಗೆ ರಸೀದಿ, ಗೊಬ್ಬರ, ನಾಟಕ ಕಂಪೆನಿ, ಲಡ್ಡು ಪ್ರಸಾದ ಪಾಕೇಟ್, ವಿದ್ಯುತ್ ಅಲಂಕಾರ ಮತ್ತು ವಿದ್ಯುತ್ ಪೂರೈಕೆ, ಖಾಸಗಿ ವಾಹನಗಳ ನಿಲುಗಡೆ ಸೇರಿದಂತೆ ಇತರೆ ಅಂಗಡಿ ಮುಗ್ಗಟ್ಟು ಹರಾಜು ಪ್ರಕ್ರಿಯೆ ನಡೆಸಬೇಕು. ಇಲ್ಲವಾದರೆ ಬೇಡ ಎಂದು ಸಾಮೂಹಿಕ ಬೇಡಿಕೆ ಇಡಲಾಯಿತು.
ಪ್ರತಿಭಟನೆ ನೇತೃತ್ವವನ್ನು ವಿವಿಧ ನಾಟಕ ಕಂಪೆನಿಗಳ ಮಾಲೀಕರು, ಸಂಘ ಸಂಸ್ಥೆಗಳ ಮುಖಂಡರು, ರೈತ ಪರ ಸಂಘಟನೆ ಮುಖಂಡರು, ವರ್ತಕರು ಮತ್ತಿತರರು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.