ADVERTISEMENT

`ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:55 IST
Last Updated 24 ಏಪ್ರಿಲ್ 2013, 9:55 IST

ಮಾನ್ವಿ: ರಾಜ್ಯದಲ್ಲಿ ಜೆಡಿಎಸ್  ಮತ್ತೊಮ್ಮೆ ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು. 65ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಉತ್ತರ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಜೆಡಿಎಸ್  ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಪಟ್ಟಣದ ಟಿಎಪಿಸಿಎಂಎಸ್  ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಪರವಾದ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಅಂಗವಿಕಲ, ವೃದ್ಧಾಪ್ಯ ಹಾಗೂ ವಿಧವಾ ಮಾಸಾಶನವನ್ನು 400ರೂಪಾಯಿಯಿಂದ 1,500 ರೂ.ಗೆ ಹೆಚ್ಚಿಸಲಾಗುವುದು. ಅಲ್ಪಸಂಖ್ಯಾತರು, ನೇಕಾರರು ಹಾಗೂ ದಲಿತರು  ವಿವಿಧ ಅಭಿವೃದ್ಧಿ ನಿಗಮಗಳಿಂದ ಪಡೆದ 2ಲಕ್ಷ ರೂಪಾಯಿ ಸಾಲ ಮನ್ನಾ ಮಾಡಲಾಗುವುದು. ಅಪೌಷ್ಟಿಕತೆಯಿಂದ ಬಳಲುವ ಬಡ ಗರ್ಭಿಣಿಯರಿಗೆ 12ತಿಂಗಳ ವರೆಗೆ ಪ್ರತಿ ತಿಂಗಳು 5ಸಾವಿರ ಮಾಸಾಶನ ವಿತರಣೆ ಸೇರಿದಂತೆ ಹಲವು ಜನಪರ ಹಾಗೂ ಅಭಿವೃದ್ಧಿಪರವಾದ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅವರು ಭರವಸೆ ನೀಡಿದರು.

ಮಾನ್ವಿಯಲ್ಲಿ ತಾವೇ ಜೆಡಿಎಸ್ ಅಭ್ಯರ್ಥಿ ಇದ್ದಂತೆ ಎಂದು ಘೋಷಿಸಿದ ಕುಮಾರಸ್ವಾಮಿ, ರಾಜಾ ವೆಂಕಟಪ್ಪ ನಾಯಕ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಕೋರಿದರು. ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ಮಾನ್ವಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು.

ಸ್ಥಳೀಯ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಸವಂತಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಹಿರಿಯ ಮುಖಂಡ ಈ.ಆಂಜನೇಯ ರಾಯಚೂರು, ತಾಲ್ಲೂಕು ಅಧ್ಯಕ್ಷ ಹರವಿ ಪಂಪಾಪತಿ ಪಾಟೀಲ್, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಸೈಯದ್ ಹುಸೇನ್, ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ ಹಾಗೂ ಶಕೀಲ್ ಬೇಗ್, ಮಲ್ಲಪ್ಪ ಹೂಗಾರ, ಚೆನ್ನಬಸಯ್ಯ ಸ್ವಾಮಿ, ಯುವ ಘಟಕದ ಅಧ್ಯಕ್ಷ ಶಿವರಾಜ ನಾಯಕ ಚಾಗಬಾವಿ, ನಗರಾಧ್ಯಕ್ಷ ಇಬ್ರಾಹಿಂ ಖುರೇಷಿ, ಈರಣ್ಣ ಮರ್ಲಟ್ಟಿ ಪೋತ್ನಾಳ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಎಸ್.ಎ.ರಷೀದ್ ಹಾಗೂ ಶೌಕತ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.