ADVERTISEMENT

ಜ್ಞಾನ ವಲಯ ಸಮುಚ್ಛಯ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 6:30 IST
Last Updated 14 ಮಾರ್ಚ್ 2012, 6:30 IST

ರಾಯಚೂರು: ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾದ ಎಲ್ಲ ವಿಷಯ ಕುರಿತ ಜ್ಞಾನ ವಲಯ ಸಮುಚ್ಛಯ ಕಟ್ಟಡ ನಿರ್ಮಾಣವನ್ನು  ಬಾಲ ವಿಕಾಸ ಅಕಾಡೆಮಿ ಕೈಗೊಂಡಿದೆ ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯೆ ಲಲಿತಾ ಕುಲಕರ್ಣಿ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಬಾಲವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ `ಮಕ್ಕಳ ಹಬ್ಬ-2012~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಶು ಪ್ರತಿಭೆ, ಶಿಶು ದಾಖಲೀಕರಣ, ಅರಿವು-ನೆರವು, ಮಿತ್ರಪಡೆ, ಹಿಗ್ಗು ಮೊಗ್ಗು, ವಿಜ್ಞಾನ ಕಮ್ಮಟ, ವಿಮರ್ಶಾ ಕಮ್ಮಟ, ಚಿತ್ರ ಪ್ರದರ್ಶನ, ಅರಳು-ಮೊಗ್ಗು ಎಂಬ ಮಕ್ಕಳೇ ಬರೆದ ಲೇಖನ, ಕವನ ಆಧರಿಸಿದ ಪತ್ರಿಕೆ ಪ್ರಕಟಣೆ ಮಾಡುತ್ತಿದೆ.

ನೂತನವಾಗಿ ಜ್ಞಾನ ವಲಯ ಸಮುಚ್ಛಯ ಕಟ್ಟಡದಲ್ಲಿ  ವಿಶ್ವ ಮಾನವ ಅರಿವಿನ ವೇದಿಕೆ, ತಾರಾಲಯ, ಇ-ತಂತ್ರಜ್ಞಾನ, ಪರಿಸರ, ವಿಜ್ಞಾನ ಅಂಶ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಸಮಗ್ರ ಮಾಹಿತಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಅಲ್ಲದೇ ಮಕ್ಕಳ ಸಾಧನೆ, ಪ್ರತಿಭೆ ಗುರುತಿಸಿ ಗೌರವ ಪ್ರಶಸ್ತಿ ನೀಡಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಮಕ್ಕಳ ನಡುವಿನ ಅಂತರ ತಗ್ಗಿಸಲು ಸ್ನೇಹ ಸೇತು, ನಗರದ ಪ್ರಮುಖ ಸ್ಥಳಗಳಿಗೆ ಹಳ್ಳಿ ಮಕ್ಕಳು ಭೇಟಿ ಮಾಡುವುದು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಬಾಲ ವಿಕಾಸ ಆಕಡೆಮಿ ಕೈಗೊಂಡಿದೆ. ಇಂಥ ಮಹತ್ವದ ಅಂಶಗಳಲ್ಲಿ ಮಕ್ಕಳ ಹಬ್ಬವೂ ಒಂದಾಗಿದೆ ಎಂದರು.

ಮಕ್ಕಳ ಪ್ರತಿಭಾ ವಿಕಾಸಕ್ಕೆ ಬಾಲ ವಿಕಾಸ ಆಕಡೆಮಿಯು ಹಲವು ರೀತಿಯ ಯೋಜನೆ ರೂಪಿಸಿ ಕಾರ್ಯತತ್ಪರವಾಗಿದೆ. ವಿಶೇಷವಾಗಿ `ಮಕ್ಕಳ ಹಬ್ಬ~ ಎಂಬ ಕಾರ್ಯಕ್ರಮ ಗ್ರಾಮೀಣ, ನಗರ ಪ್ರದೇಶದ ಮಕ್ಕಳ ಕಲಾ ಪ್ರತಿಭೆ ಬೆಳಗಲು ಮಹತ್ವದ ವೇದಿಕೆಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಮೃತ ಬೆಟ್ಟದ್ ಮಾತನಾಡಿ, ಪ್ರತಿಭಾ ಕಾರಂಜಿಯ ಪ್ರತಿರೂಪವಾಗಿ ಮಕ್ಕಳ ಹಬ್ಬ ಕಾರ್ಯಕ್ರಮ ಆಯೋಜಿಸಿರುವುದು ಮಕ್ಕಳ ಪ್ರತಿಭಾ ವಿಕಾಸಕ್ಕೆ, ಸರ್ವಾಂಗೀಣ ಏಳ್ಗೆಗೆ ಪೂರಕವಾದ ಕಾರ್ಯಕ್ರಮವಾಗಿದೆ. ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳ ಮನಸ್ಸು ಅರಳಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೋಹಿಣಿ ಹಿರೇಮಠ ಮಾತನಾಡಿ, ಮಕ್ಕಳಿಗೆ ಬಾಲ್ಯ ಜೀವನದ ಆಟ, ಪಾಠ, ಕಲೆಗಳ ಮೂಲಕ ಕುಣಿದು ನಲಿದು ಪ್ರತಿಭೆ ಮೆರೆಯುವ ಅವಕಾಶ ಕಲ್ಪಿಸಿರುವುದು ಈ ಮಕ್ಕಳ ಹಬ್ಬದ ಉದ್ದೇಶ. ಲಗೋರಿ, ಚಿನ್ನಿ ದಾಂಡು, ಹಗ್ಗದಾಟ, ಬುಗರಿ, ಗಾಳಿಪಟ ಸೇರಿದಂತೆ ಹತ್ತಾರು ರೀತಿಯ ನಮ್ಮದೇ ಆದ ಸಾಂಪ್ರದಾಯಿಕ ಆಟಗಳನ್ನು ಮಕ್ಕಳಿಗೆ ನೆನಪಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಬಾಲವಿಕಾಸ ಅಕಾಡೆಮಿಯ ಜಿಲ್ಲಾ ಸಮಿತಿ ಸದಸ್ಯ ಹಫೀಜುಲ್ಲಾ ವಹಿಸಿದ್ದರು. ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿ ನಾಗಪ್ಪ ರೇವಡಕುಂದಿ ವೇದಿಕೆಯಲ್ಲಿದ್ದರು. ಶಿಶು ಅಭಿವೃದ್ಧಿ ಅಧಿಕಾರಿ ಮದುಸೂಧನ  ನಿರೂಪಿಸಿದರು.

ಸಿಂಧನೂರು, ಲಿಂಗಸುಗೂರು, ಗಾಣಧಾಳ, ಕಲವಲದೊಡ್ಡಿ, ದೇವದುರ್ಗ, ರಾಯಚೂರು, ರಾಜಲಬಂಡಾ, ಮಸರಕಲ್, ಬಿಜನಗೇರಾ ಗ್ರಾಮದ ಆಯ್ದ ಶಾಲೆಯ ಪ್ರತಿಭಾನ್ವಿತ ಮಕ್ಕಳು ಪಾಲ್ಗೊಂಡಿದ್ದರು.
ದೇಶಭಕ್ತಿ ಗೀರೆ, ಜಾನಪದ ನೃತ್ಯ, ಕವ್ವಾಲಿ, ನಾಟಕ, ಕೋಲಾಟ, ಗಜಲ್, ಕ್ಲೇ ಮಾಡಲಿಂಗ್, ಚಿತ್ರಕಲೆ, ಭರತನಾಟ್ಯ, ಚಿತ್ರಕಲೆ, ಭರತನಾಟ್ಯ, ಭಾವಗೀತೆ, ಲಘು ಸಂಗೀತ, ಮಿಮಿಕ್ರಿ, ಗ್ರಾಮೀಣ ಕ್ರೀಡೆ ವಿಭಾಗದಲ್ಲಿ ಮಕ್ಕಳು ಪಾಲ್ಗೊಂಡು ಪ್ರತಿಭೆ ಮೆರೆದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.