ADVERTISEMENT

ತಾಂಡಾಗಳಲ್ಲಿ ಮೂಲಸೌಕರ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 6:26 IST
Last Updated 17 ಡಿಸೆಂಬರ್ 2017, 6:26 IST
ದೇವದುರ್ಗ ಪುರಸಭೆ ವ್ಯಾಪ್ತಿಯ ನಾಮನಾಯ್ಕ ತಾಂಡಾ ರಸ್ತೆಯ ದುಸ್ಥಿತಿ
ದೇವದುರ್ಗ ಪುರಸಭೆ ವ್ಯಾಪ್ತಿಯ ನಾಮನಾಯ್ಕ ತಾಂಡಾ ರಸ್ತೆಯ ದುಸ್ಥಿತಿ   

ವೆಂಕಟೇಶ ಪಾಟೀಲ ನಿಲೋಗಲ್

ದೇವದುರ್ಗ: ಹತ್ತು ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಪಟ್ಟಣದ ಸುತ್ತಮುತ್ತಲ್ಲಿನ ಕೆಲವು ದೊಡ್ಡಿ ಮತ್ತು ತಾಂಡಾಗಳನ್ನು ಪುರಸಭೆಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಜನಸಂಖ್ಯೆ ಆಧಾರದ ಮೇಲೆ ಹೆಚ್ಚುವರಿಯಾಗಿ ವಾರ್ಡ್‌ಗಳನ್ನು ರಚನೆ ಮಾಡಲಾಗಿದೆ. ಆದರೆ, ಅಲ್ಲಿನ ಜನರಿಗೆ ಮೂಲಸೌಕರ್ಯ ಇಂದಿಗೂ ಮರೀಚಿಕೆಯಾಗಿದೆ.

ಈ ಹಿಂದೆ ಕರಿಗುಡ್ಡ ಮತ್ತು ಕೆ. ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದ ನಾಮನಾಯ್ಕ ತಾಂಡಾ, ತಳವಾರ ದೊಡ್ಡಿ, ಬೂದೆಪ್ಪನ ತಾಂಡಾ, ಈರಪ್ಪನ ತಾಂಡಾ, ಕೆಳಗಿನ ಕೊರ್ಲೆರ್‌ ದೊಡ್ಡಿ, ಆರ್ಯರ್‌ ದೊಡ್ಡಿ, ಮೇಲಿನ ಕರ್ಲೆರ್‌ ದೊಡ್ಡಿ, ಹಳ್ಳದರಾಯನ ದೊಡ್ಡಿ, ಮರಿಗೆಮ್ಮ ದಿಬ್ಬ ತಾಂಡಾ, ಜಕ್ಕಲರ್‌ ದೊಡ್ಡಿ, ಮಟ್ಲರ್‌ ದೊಡ್ಡಿ, ಗಾಲೇರ್‌ ದೊಡ್ಡಿ, ಗೋಗೇರ್‌ ದೊಡ್ಡಿ, ಕಾಳೇರ್‌ ದೊಡ್ಡಿ ಮತ್ತು ಇತರ ದೊಡ್ಡಿ, ತಾಂಡಾಗಳನ್ನು ಪುರಸಭೆಗೆ ಸೇರ್ಪಡೆ ಮಾಡಲಾಗಿದೆ.

ADVERTISEMENT

ಇವೆಲ್ಲವೊ ಗುಡ್ಡಗಾಡು ಪ್ರದೇಶದಲ್ಲಿ ಇವೆ ಮತ್ತು ಇಲ್ಲಿನ ಜನರು ಮೂಲಸೌಕರ್ಯ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಪುರಸಭೆಯಾಗಿ ಬಡ್ತಿಯಾದ ನಂತರ ಈವರೆಗೆ ಒಳಚರಂಡಿ ಕಾಮಗಾರಿಗಾಗಿ ₹45ಕೋಟಿ , ಶಾಶ್ವತ ಕುಡಿಯುವ ನೀರಿನ ಬೃಹತ್‌ ಯೋಜನೆಗಾಗಿ ₹45 ಕೋಟಿ, ಮುಖ್ಯಮಂತ್ರಿ ವಿಶೇಷ ಅನುದಾನ ₹10 ಕೋಟಿ , ನಗರೋತ್ಥಾನ ಯೋಜನೆ ಅಡಿ ₹10 ಕೊಟಿ ಸೇರಿದಂತೆ ಪುರಸಭೆಗೆ ಮಂಜೂರಾದ ವಿವಿಧ ಯೋಜನೆಗಳು ದೊಡ್ಡಿ, ತಾಂಡಾದ ಜನರಿಗೆ ತಲುಪಿಲ್ಲ.

ಹೆಚ್ಚುವರಿಯಾಗಿ ವಾರ್ಡ್‌ಗಳನ್ನು ರಚನೆ ಮಾಡಿದ ನಂತರ ದೊಡ್ಡಿ ಮತ್ತು ತಾಂಡಾಗಳ ಜನಸಂಖ್ಯೆಗೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸುವುದು ಪುರಸಭೆ ಆಡಳಿತ ಮಂಡಳಿಯ ಕರ್ತವ್ಯವಾಗಿದ್ದರೂ ಅಧಿಕಾರಿಗಳಿಗೆ ದೊಡ್ಡಿ ಮತ್ತು ತಾಂಡಾ ಎಲ್ಲಿ ಬರುತ್ತವೆ ಎಂಬುವುದೇ ಗೊತ್ತಿಲ್ಲ.

ಒಳಚರಂಡಿ ಯೋಜನೆ ರೂಪಿಸುವಾಗ ದೊಡ್ಡಿ ಮತ್ತು ತಾಂಡಾಗಳನ್ನು ಕೈಬಿಡಲಾಗಿದೆ. ತಾಲ್ಲೂಕಿನ ಗೂಗಲ್‌ ಗ್ರಾಮದ ಬ್ರಿಜ್‌ ಕಂ ಬ್ಯಾರೇಜ್‌ ಮೂಲಕ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ₹52 ಕೋಟಿ ಯೋಜನೆಯನ್ನು ರೂಪಿಸುವಾಗಲೂ ಸಹ ದೊಡ್ಡಿ, ತಾಂಡಾಗಳನ್ನು ಯೋಜನೆಯಲ್ಲಿ ಸೇರ್ಪಡೆ ಮಾಡದೆ ನಿರ್ಲಕ್ಷಿಸಲಾಗಿದೆ.

ಪುರಸಭೆ ವ್ಯಾಪ್ತಿಯ ದೊಡ್ಡಿ ಮತ್ತು ತಾಂಡಾಗಳ ಜನರು ವರ್ಷ ಪೂರ್ತಿ ಕುಡಿಯುವ ನೀರಿನ ತೊಂದರೆಯನ್ನು ಅನುಭವಿಸುತ್ತಿದ್ದರೂ ಅಲ್ಲಿನ ಜನರಿಗೆ ಶಾಶ್ವತ ಯೋಜನೆಗಳನ್ನು ರೂಪಿಸುವಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂಬುವುದು ಅಲ್ಲಿನ ಜನರ ಆರೋಪವಾಗಿದೆ.

ಪಟ್ಟಣದಿಂದ 5ರಿಂದ 7 ಕಿ.ಮೀ ದೂರದಲ್ಲಿನ 15ಕ್ಕೂ ಹೆಚ್ಚು ದೊಡ್ಡಿ ಮತ್ತು ತಾಂಡಾಗಳ ಜನರಿಗೆ ಆಸ್ಪತ್ರೆ ಇಲ್ಲ. ತುರ್ತು ಸಂದರ್ಭದಲ್ಲಿ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬರಬೇಕು. ದೊಡ್ಡಿ ಮತ್ತು ತಾಂಡಾಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಸರ್ಕಾರಿ ಬಸ್‌ ವ್ಯವಸ್ಥೆ ಇಲ್ಲ.

ದಿನ ನಿತ್ಯದ ಕೆಲಸ ಕಾರ್ಯಗಳಿಗೆ ದೊಡ್ಡಿ, ತಾಂಡಾದ ಜನರು ನಡೆದುಕೊಂಡೆ ಪಟ್ಟಣಕ್ಕೆ ಬರಬೇಕಾಗಿದೆ. ಮಹಿಳೆಯರ ಶೌಚಾಲಯ ಸೇರಿದಂತೆ ಶಾಲೆ, ಕುಡಿಯುವ ನೀರು, ರಸ್ತೆ ಮತ್ತು ಇತರ ಮೂಲ ಸೌಕರ್ಯಗಳು ನಮಗೆ ಗಗನಕುಸುಮವಾಗಿವೆ ಎಂದು ನಾಮನಾಯ್ಕ ತಾಂಡಾದ ಧರ್ಮಣ್ಣ ಪೂಜಾರಿ ಅಳಲು ತೋಡಿಕೊಂಡರು.

ಬಹುತೇಕ ಎಲ್ಲ ದೊಡ್ಡಿ, ತಾಂಡಾಗಳಲ್ಲಿನ ಶಾಲೆಗಳಲ್ಲಿ ಐದನೇ ತರಗತಿ ಮಾತ್ರ ಇದೆ. ಪ್ರೌಢಶಾಲೆ ಸೇರಿದಂತೆ ಕಾಲೇಜುಗಳಿಗೆ ಪಟ್ಟಣಕ್ಕೆ ಬರಬೇಕು. ಹೀಗಾಗಿ ಕೆಲವು ವಿದ್ಯಾರ್ಥಿಗಳು ಶಾಲೆ ಬಿಟ್ಟ ಉದಾಹರಣೆಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯ ಮಾಡಿಕೊಡಬೇಕೆಂದು ಈರಪ್ಪನ ತಾಂಡಾದ ವಿದ್ಯಾರ್ಥಿ ವಿರೇಶ ರಾಠೋಡ್‌ ಒತ್ತಾಯಿಸಿದರು.

* * 

ಕುಡಿಯುವ ನೀರಿನ ಪ್ಯಾಕೇಜ್‌ 2ರಲ್ಲಿ ದೊಡ್ಡಿ ಮತ್ತು ತಾಂಡಾಗಳನ್ನು ಸೇರ್ಪಡೆ ಮಾಡಲಾಗಿದ್ದು, ಮಂಜೂರಾತಿ ಹಂತದಲ್ಲಿ ಇದೆ.
ಫಿರೋಜ್‌ಖಾನ್ ಅವಾಲ್ದಾರ್, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.